ಸುಳ್ಯ:ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ 26ನೇ ವರ್ಷದ ಅಂತಾರಾಜ್ಯ ಮಟ್ಟದ ಉಚಿತ ವೇದ- ಯೋಗ-ಕಲಾ ಶಿಬಿರವು ಇದೇ ಎಪ್ರಿಲ್ 19ರಿಂದ ಮೇ.17ರ ತನಕ ಸುಳ್ಯ ಬಸ್ ನಿಲ್ದಾಣದ ಬಳಿಯ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೇದ ಶಿಬಿರಕ್ಕೆ
ಮುಂಚಿತವಾಗಿ ಏ.12ರಿಂದ 17ರ ತನಕ ಸಂಸ್ಕಾರವಾಹಿನಿ ಶಿಬಿರ ಕೇಶವಕೃಪಾದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಪುಟ್ಟ ಪುಟ್ಟ ಪುಟಾಣಿಗಳ ತೊದಲು ನುಡಿಗಳಲ್ಲಿ ವೇದ ಘೋಷಗಳು ಝೇಂಕರಿಸುವ ಮೂಲಕ ಸರಿ ಸುಮಾರು 1 ತಿಂಗಳ ಪರ್ಯಂತ ಇಲ್ಲಿನ ಪರಿಸರ ಪಾವನಗೊಳ್ಳುತ್ತದೆ. ಜೊತೆಗೆ ಭಿನ್ನ-ಭಿನ್ನ ಕಲಾಪ್ರಕಾರಗಳು ಅರಳಿ ಮೇಳೈಸುತ್ತದೆ. ಪುಟಾಣಿ ಯೋಗಪಟುಗಳು ದೇಹ-ಮನಸ್ಸನ್ನು ಯೋಗದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಆರಂಭದಲ್ಲಿ ವೇದ ತರಗತಿಯ ಉದ್ದೇಶವನ್ನಷ್ಟೇ ಹೊಂದಿದ್ದ ಪ್ರತಿಷ್ಠಾನ, ಆ ಬಳಿಕ ವಿವಿಧ ಚಟುವಟಿಕೆಗಳ ಮೂಲಕ ತನ್ನ ಪರಿಧಿಯನ್ನು ವಿಸ್ತರಿಸಿತು. ಯೋಗದ ಜೊತೆಗೆ ಕಲಾ ಪ್ರಕಾರಗಳಾದ ಯಕ್ಷಗಾನ, ಕಂಸಾಳೆ, ಜಾದೂ, ಭಜನೆ, ಸಂಗೀತ, ಪೇಪರ್ ಕಟ್ಟಿಂಗ್, ಮಿಮಿಕ್ರಿ, ಈಜು ತರಬೇತಿ ಮೊದಲಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಕೈಗೆತ್ತಿಕೊಂಡಿತು. ಸುಮಾರು 30 ದಿನಗಳ ಕಾಲ ನಡೆಯುವ ಶಿಬಿರವು ನಿರ್ದಿಷ್ಟ ಸಮುದಾಯದ ಉಪನೀತ ವಟುಗಳಿಗೆ ಸೀಮಿತವಾಗಿದ್ದು, ಸಮಾಜದ ಎಲ್ಲಾ ಜಾತಿ ಸಮುದಾಯದ ಮಕ್ಕಳಿಗೂ ಸಂಸ್ಕಾರ ಕಲಿಸುವ ಉದ್ದೇಶದಿಂದ ಒಂದು ವಾರಗಳ ಕಾಲ ನಡೆಸಲ್ಪಡುವ ‘ಸಂಸ್ಕಾರವಾಹಿನಿ’ ಎಂಬ ವಿನೂತನ ಶಿಬಿರವನ್ನು ಪ್ರತಿಷ್ಠಾನದ ವತಿಯಿಂದ ಆರಂಭಿಸಲಾಯಿತು.

ಈ ಶಿಬಿರದಲ್ಲಿ ಮುಖ್ಯವಾಗಿ ಚರಕ ಸಂಹಿತೆಯಲ್ಲಿ ಉಲ್ಲೇಖಿಸಲ್ಪಟ್ಟ ಆರೋಗ್ಯಕರ ಆಯುರ್ವೇದ ಭೋಜನ ಪದ್ಧತಿ, ಊಟ ತಿಂಡಿ ಸೇವಿಸುವಾಗ ಅಳವಡಿಸಿಕೊಳ್ಳಬೇಕಾದ ಶಿಸ್ತಿನ ಕ್ರಮಗಳು, ದೇವರ ತೀರ್ಥ-ಪ್ರಸಾದ ಸೇವಿಸುವ ಶಾಸ್ರೋಕ್ತ ಪದ್ಧತಿ, ಹಿಂದೂ ಧರ್ಮದ ನಂಬಿಕೆಗಳು ಮತ್ತು ಸಹಸ್ರನಾಮ, ವಿಷ್ಣು ಸಹಸ್ರನಾಮ ಮುಂತಾದ ಶ್ಲೋಕಗಳನ್ನು ಸ್ಪುಟವಾಗಿ ಪಠಿಸುವ ಸಾಂಪ್ರದಾಯಿಕ ವಿಧಾನ, ಸುಭಾಷಿತಗಳು, ಆದರ್ಶ ದಿನಚರಿ ರೂಪಿಸಿಕೊಳ್ಳುವ ಬಗೆ, ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಕಲಿಸಿಕೊಡಲಾಗುತ್ತದೆ.
ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ಪ್ರತಿಷ್ಠಾನದ ವೇದ ಶಿಬಿರಕ್ಕೆ ಪ್ರತೀ ವರ್ಷವೂ ರಾಜ್ಯ ಮತ್ತು ಹೊರರಾಜ್ಯಗಳಿಂದ ಹಲವಾರು ವಿದ್ಯಾರ್ಥಿಗಳಿಂದ ಅರ್ಜಿಗಳು ಬರುತ್ತಿದ್ದು, ಅವುಗಳ ಪೈಕಿ ಸಂದರ್ಶನ ನಡೆಸಿ ಆರಿಸಿದ ಋಗೈದ ಹಾಗೂ ಯಜುರ್ವೇದದ 85 ಹೊಸ ವಿದ್ಯಾರ್ಥಿಗಳಿಗೆ ವೇದ ಶಿಬಿರಕ್ಕೆ ಪ್ರವೇಶ ಕಲ್ಪಿಸಿಕೊಡಲಾಗುತ್ತದೆ. ಒಟ್ಟು ಪ್ರಸ್ತುತ ಶಿಬಿರಾರ್ಥಿಗಳ ಸಂಖ್ಯೆ 220ಕ್ಕೆ ತಲುಪಿದೆ. ಯಜುರ್ವೇದ ವಿಭಾಗದಲ್ಲಿ 5 ತರಗತಿಗಳಿದ್ದು, ಸಂಧ್ಯಾವಂದನೆಯಿಂದ ಮೊದಲ್ಗೊಂಡು ಸೂಕ್ತಗಳು, ರುದ್ರ ಚಮಕ ಶ್ರೀ ಶಿವರಾಧನೆಯ ಪ್ರಾಕ್ಟಿಕಲ್ ಅಲ್ಲದೆ ಅಗ್ನಿಮುಖ ಪ್ರಯೋಗ, ಸಪ್ತಶತೀ ದುರ್ಗಾಪೂಜೆ ಪಾಠಗಳೂ ನಡೆಯುತ್ತಿವೆ. 25 ವರ್ಷಗಳಲ್ಲಿ ಒಟ್ಟು 4613 ವಿದ್ಯಾರ್ಥಿಗಳು ಪ್ರತಿಷ್ಠಾನದ ಶಿಬಿರದಲ್ಲಿ ವೇದಾಧ್ಯಯನ ನಡೆಸಿದ್ದಾರೆ ಎಂದು ಹೇಳಿದರು.
ರಾಘವೇಶ್ವರ ಶ್ರೀ ಭೇಟಿ:
ಈ ವರ್ಷ ವಿಶೇಷವಾಗಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಎಪ್ರಿಲ್ 26 ರಂದು ಶಿಬಿರಕ್ಕೆ ಅಗಮಿಸಿ ಮೊಕ್ಕಾಂ ಮಾಡಿ 27ರಂದು ಶಿಬಿರಾರ್ಥಿಗಳೇ ನೆರವೇರಿಸುವ ಹವನದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳನ್ನು ಆಶೀರ್ವಚನದ ಮೂಲಕ ಹರಸಲಿದ್ದಾರೆ.
ಸುಳ್ಯದ ಮಣ್ಣಿನಲ್ಲಿ ವೇದ ಮಂತ್ರಘೋಷ ಬಿತ್ತಿದ ಪ್ರತಿಷ್ಠಾನ:
ಪ್ರತಿಷ್ಠಾನದ ಅಧ್ಯಕ್ಷರಾಗಿ ವೇ.ಮೂ.ಪುರೋಹಿತ ನಾಗರಾಜ್ ಭಟ್, ಕಾರ್ಯದರ್ಶಿಯಾಗಿ ಶ್ರೀದೇವಿ ನಾಗರಾಜ್ ಭಟ್, ಪ್ರತಿಷ್ಠಾನದ ಅಧ್ಯಕ್ಷರ ತೀರ್ಥರೂಪರಾದ ಗೋಪಾಲಕೃಷ್ಣ ಭಟ್ ವಗೆನಾಡು ಇವರ ಗೌರವಾಧ್ಯಕ್ಷತೆಯಲ್ಲಿ ನಡೆಸಲ್ಪಡುತ್ತಿರುವ ‘ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ’ ವು ಸುಳ್ಯದ ಮಣ್ಣಿನಲ್ಲಿ ಪ್ರಾಚೀನ ವೇದ ಮಂತ್ರಘೋಷಗಳು ಮತ್ತೆ ಝೇಂಕರಿಸುವಂತೆ ಮಾಡಿ, ಅಂತರ್ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ ಎಂದು ಪುರೋಹಿತ ನಾಗರಾಜ ಭಟ್ ತಿಳಿಸಿದರು.
ಶಿಬಿರದ ಸಂಚಾಲಕರಾದ ಅಭಿರಾಮ ಭಟ್ ಸರಳಿಕುಂಜ ವೇದ ಶಿಬಿರದ ಬಗ್ಗೆ ಮಾಹಿತಿ ನೀಡಿ ‘ಏ.19 ಭಾನುವಾರ 26ನೇ ವರ್ಷದ ಶ್ರೀ ಕೇಶವ ಕೃಪಾ ವೇದ- ಯೋಗ ಕಲಾಶಿಬಿರವು ಉದ್ಘಾಟನೆಗೊಳ್ಳಲಿದ್ದು, ನಯನಕೃಷ್ಣ ಭಟ್ ಪೆರುಂಬಾರು ಹಾಗೂ ಸೌಮ್ಯಾ ನಯನಕೃಷ್ಣ ದಂಪತಿಗಳು ಉದ್ಘಾಟಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ವಹಿಸಲಿದ್ದಾರೆ, ಖ್ಯಾತ ವಾಗ್ಮಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ.ಆರತಿ ವಿ.ಬಿ.ಬೆಂಗಳೂರು ದಿಕ್ಕೂಚಿ ಉಪನ್ಯಾಸ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಮತ್ತು ಕೇಶವಕೃಪಾ ಹಿರಿಯ ವಿದ್ಯಾರ್ಥಿ ಕಿರಣ ಎ.ಎಸ್. ಅರ್ತ್ಯಡ್ಕ ಭಾಗವಹಿಸಲಿದ್ದಾರೆ. ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಶುಭಹಾರೈಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಪ್ರತಿಷ್ಠಾನದ ಪ್ರಬಂಧಕ ಯಶಸ್ವಿ ಪಿ. ಭಟ್, ಸರಣಿ ಶಿವಪೂಜಾ ಅಭಿಯಾನದ ಪ್ರಧಾನ ಸಂಚಾಲಕ ಗೋಪಾಲಕೃಷ್ಣ ಭಟ್ ಶಿವನಿವಾಸ ಹಾಗೂ ಸದಸ್ಯೆ ಸುಜಾತ ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು.










