ಸುಳ್ಯ:ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಶೇ.100 ಅಂಕ ಪಡೆಯುವುದು ಹೆಮ್ಮೆಯ ವಿಚಾರ. ಕನ್ನಡ ಭಾಷೆ ಬೆಳೆಯಲು ಎಲ್ಲರ ಪ್ರೋತ್ಸಾಹ, ಪ್ರಯತ್ನ ಸದಾ ಇರವೇಕು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ವತಿಯಿಂದ 2023- 2024ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇ.100 ಅಂಕ ಗಳಿಸಿದ ಸುಳ್ಯ ತಾಲೂಕಿನ
ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಿ ಅವರು ಮಾತನಾಡಿದರು. ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಕಸಾಪ ಗೌರವಾರ್ಪಣೆ ಉತ್ತಮ ಕಾರ್ಯಕ್ರಮ ಎಂದು ಅವರು ಶ್ಲಾಘಿಸಿದರು.
ಅಭಿನಂದನಾ ಭಾಷಣ ಮಾಡಿದ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ ‘ನೂರು ಶೇಖಡ ಅಂಕ ಪಡೆಯುವುದು ವಿದ್ಯಾರ್ಥಿಗಳ ದೊಡ್ಡ ಸಾಧನೆ. ಕನ್ನಡ ಭಾಷೆಯನ್ನು ಬೆಳೆಸುವುದಕ್ಕೆ ಈ ರೀತಿಯ ಕಾರ್ಯಕ್ರಮ ಸಹಕಾರಿ ಎಂದು ಹೇಳಿದರು. ಕನ್ನಡ ಬೆಳೆಯಬೇಕಾದರೆ ಕನ್ನಡ ಭಾಷೆಯ ಬಳಕೆ ಹೆಚ್ಚಬೇಕು. ಮಡಿವಂತಿಕೆಯನ್ನು ಬಿಟ್ಟು ಭಾಷೆ ಬಳಸಬೇಕು ಎಂದ ಅವರು ಅದಕ್ಕಾಗಿ ಸಾಂಸ್ಕೃತಿಕ ನೆಲೆ ಗಟ್ಟಿನ ಹಿನ್ನಲೆಯಲ್ಲಿ ಭಾಷಾ ಕೌಶಲ್ಯವನ್ನು ಕಲಿಸಬೇಕು.ಕನ್ನಡದ ಪರಿಸರವನ್ನು ನಿರ್ಮಾಣ ಮಾಡಬೇಕು.ಆಗ ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಬೆಳೆಯುತ್ತದೆ ಎಂದು ಹೇಳಿದರು.
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮ ಉದ್ಘಾಟಿಸಿದರು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತಯ ಪರಿಷತ್ತಿನ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ,ಜಿಲ್ಲಾ ಕಸಾಪ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ,ಸುಳ್ಯ ಕಸಾಪ ಗೌರವ ಕಾರ್ಯದರ್ಶಿಗಳಾದ ಚಂದ್ರಮತಿ ಕೆ, ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ
ಉಪಸ್ಥಿತರಿದ್ದರು.ಕಸಾಪ ನಿರ್ದೇಶಕಿ ಲತಾಶ್ರೀ ಸುಪ್ರಿತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ ವಿವಿಧ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಕನ್ನಡ ಪರೀಕ್ಷೆಯಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.