ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. 2024-25ರ ಸಾಲಿನ ಆಯವ್ಯಯದಲ್ಲಿ ಸಿದ್ದರಾಮಯ್ಯ ಅವರು ಶಿಕ್ಷಣ, ಕೃಷಿ ಸೇರಿ ವಿವೊಲಿಧ ಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಮುಖ್ಯಾಂಶಗಳ ಮಾಹಿತಿ ಇಲ್ಲಿದೆ. ಎಲ್ಲಾ ವಸತಿರಹಿತರಿಗೆ ಸೂರು ಒದಗಿಸುವ ಧ್ಯೇಯದೊಂದಿಗೆ 2024-25ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ದಾಖಲೆಯ 15ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ, ಬಾಕಿ ಉಳಿದಿರುವ 12 ಲಕ್ಷ ಮನೆಗಳ ನಿರ್ಮಾಣದ
ಹೊಣೆಗಾರಿಕೆ ನಮ್ಮ ಸರ್ಕಾರದ ಮುಂದಿದೆ ಎಂದು ಹೇಳಿದ್ದಾರೆ. 2023-2024ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುತ್ತಿದೆ. 2024-25ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಇದಲ್ಲದೇ, ರಾಜ್ಯದಲ್ಲಿ ವಸತಿರಹಿತರ ಸಂಖ್ಯೆಯನ್ನು ಗುರುತಿಸಲು ಸಮೀಕ್ಷೆಯನ್ನು ನಡೆಸಲಾಗುವುದು. ನಗರ ಪ್ರದೇಶದ ಬಡ ನಿವಾಸಿಗಳಿಗೆ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯ ಒದಗಿಸಲು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ವಸತಿ ಇಲಾಖೆಯು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು
ಕೃಷಿ ಬಜೆಟ್ನಡಿ, ದೊಡ್ಡನಗರ ಬಳಿಯ ವಿತರಣಾ ತೊಟ್ಟಿಯವರೆಗೂ ವಿಸ್ತರಣೆ, ಮೇಕೆದಾಟು ಯೋಜೆನೆಗೆ ಪ್ರತ್ಯೇಕ ಯೋಜನಾ ವಿಭಾಗ ಸ್ಥಾಪನೆ, ಮನ್ರೇಗಾ ಯೋಜನೆಯಡಿ 5 ಸಾವಿರ ಸಣ್ಣ ಸರೋವರ ನಿರ್ಮಾಣ, ಕೃಷಿ ಉತ್ಪನ್ನ ಪಿಎಂಎಫ್ಎಂಇ ಯೋಜನೆಯಡಿ 80 ಕೋಟಿ ರೂ., ಎತ್ತಿನಹೊಳೆ ಯೋಜನೆ ವಿಸ್ತರಣೆ ಮಾಡುವುದಾಗಿ ಇಂದಿನ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಇದರೊಟ್ಟಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಮಿತಿಗಳ ಡಿಜಟಲೀಕರಣ, ಮಾರುಕಟ್ಟೆಗಳ ಸಮಿತಿಗಳ ಡಿಜಿಟಲೈಸ್ಗೆ 10 ಕೋಟಿ ರೂ. ಮೀಸಲು, ರಾಯಚೂರಿನಲ್ಲಿ ಹೈಟೆಕ್ ಒಣ ಮೆಣಸಿನಕಾಯಿ ಮಾರ್ಕೆಟ್, 25 ಕೋಟಿ ರೂ. ವೆಚ್ಚದಲ್ಲಿ ಮೆಣಸಿನಕಾಯಿ ಮಾರುಕಟ್ಟೆ, ಮಂಗಳೂರಿನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ, ಸ್ಥಾಪಿಸುವುದಾಗಿ ಘೋಷಿಸಲಾಗಿದೆ.
ಈ ಬಾರಿ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಖಾಲಿ ಇರುವ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಕರು ಹಾಗೂ ಉಪನ್ಯಾಸಕರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕಾಲೇಜುಗಳ ಸೌಲಭ್ಯಕ್ಕಾಗಿ 250 ಕೋಟಿ ರೂಪಾಯಿ ಮೀಸಲು ಇಡಲಾಗಿದೆ ಎಂದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಕೈಗೆಟುಕುವ ದರದಲ್ಲಿ ಒದಗಿಸುವ ಸದುದ್ದೇಶದಿಂದ ಮಹಿಳೆಯರೇ ನಡೆಸುವ ಕೆಫೆ ಸಂಜೀವಿನಿ ಕ್ಯಾಂಟೀನ್ಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ.
ಕೆಫೆ ಸಂಜೀವಿನಿ ಸ್ಥಾಪನೆಗಾಗಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ 7.50 ಕೋಟಿ ರೂ. ವೆಚ್ಚ ಮಾಡಿ 50 ಕೆಫೆಗಳನ್ನು ಸ್ಥಾಪನೆ ಮಾಡಲಾಗುವುದೆಂದು ಆಶ್ವಾಸನೆ ನೀಡಿದರು.
ಎಲ್ಲಾ ಕಚೇರಿಗಳು, ಅಂಗಡಿ ಮುಂಗಟ್ಟುಗಳು ಮತ್ತು ವಾಣಿಜ್ಯ ಸಂಸ್ಥೆಗಳ ನಂಬರ್ ಪ್ಲೇಟ್ಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.
ಜತೆಗೆ ತುಳು, ಕೊಡವ, ಬ್ಯಾರಿ, ಕೊಂಕಣಿ ಭಾಷೆಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ.
ಈ ಬಾರಿ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಸ್ಮಾರ್ಟ್ಫೋನ್ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಮಗ್ರ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಈ ಯೋಜನೆಯಡಿ ರೈತರಿಗೆ ಕೆಲ ವಿಷಯಗಳ ಬಗ್ಗೆ ಮಾರ್ಗದರ್ಶನ ಜೊತೆಗೆ ಬೆಂಬಲ ನೀಡಲು ಸರಕಾರ ಕ್ರಮ ಕೈಗೊಂಡಿದೆ. ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆಗಳನ್ನು ಒಳಗೊಂಡಂತೆ ಸಮಗ್ರ ಕೃಷಿ ಕೈಗೊಳ್ಳುವ ಮೂಲಕ ಆದಾಯದಲ್ಲಿ ಸುಸ್ಥಿರತೆಯನ್ನು ಕಂಡುಕೊಳ್ಳಲು ಬೆಂಬಲ ನೀಡುವುದು ಎಂದು ಘೋಷಿಸಿದ್ದಾರೆ.
ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದರು. ಪ್ರಮುಖವಾಗಿ ಶೀಘ್ರದಲ್ಲಿಯೇ ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ರಾಜ್ಯದ 30 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ಗಳ ಉನ್ನತೀಕರಣಕ್ಕಾಗಿ ಒಟ್ಟು 30 ಕೋಟಿ ರೂ. ಅನುದಾನ ಒದಗಿಸಲಾಗುವುದು. ಶಾಲೆಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕಾಗಿ ‘ನಾವು ಮನುಜರು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕಾಮಗಾರಿಗಳಿಗೆ 250 ಕೋಟಿ ರೂ. ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಕಾಮಗಾರಿಗಳಿಗೆ 120 ಕೋಟಿ ರೂ. ಅನುದಾನ ಒದಗಿಸಲಾಗುವುದು. ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಅಗತ್ಯತೆಗನುಗುಣವಾಗಿ ತುಂಬಲಾಗುವುದು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುವುದು.
ಅತ್ಯಾಧುನಿಕ ಕ್ರೀಡಾ ನಗರ ಸ್ಥಾಪನೆ, ಒಲಿಂಪಿಕ್ಸ್ ಕ್ರೀಡಾ ವಿಜೇತರಿಗೆ ಬಹುಮಾನ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ ಮಾಡಲಾಗುವುದು.ಬೆಂಗಳೂರಿನಲ್ಲಿ ಆಕರ್ಷಕ ಪ್ರವಾಸಿ ತಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ನಗರಾಭಿವೃದ್ಧಿ ಅಂಗಸಂಸ್ಥೆ ಬಿಬಿಎಂಪಿ, ಬಿಎಂಆರ್ಸಿಎಲ್, ಬಿಡಬ್ಲ್ಯುಎಸ್ಎಸ್ಬಿ, ಬಿಡಿಎನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು. 2025ರೊಳಗೆ 44 ಕಿ.ಮೀ ಮೆಟ್ರೋ ಮಾರ್ಗ ಸೇರ್ಪಡೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.
ಗ್ರಾಮೀಣ ಪತ್ರಕರ್ತರು ಸೇರಿದಂತೆ ಎಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಬಜೆಟ್ನಲ್ಲಿ ಘೋಷಿಸಿದ್ದು, ಇದರೊಂದಿಗೆ ಗ್ರಾಮೀಣ ಪತ್ರಕರ್ತರ ದಶಕಗಳ ಕನಸು ನನಸಾಗಿದೆ.
ಮೀನುಗಾರರ ರಕ್ಷಣೆಗೆಂದೇ ಸಮುದ್ರ ಆಂಬ್ಯುಲೆನ್ಸ್ ಯೋಜನೆಯನ್ನು ಬಜೆಟ್ ಮಂಡನೆ ವೇಳೆ ಘೋಷಿಸಿದೆ.
ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷವಾಗಿ 3 ಸಾವಿರ ಕೋಟಿ ರೂಪಾಯಿ ಯೋಜನೆಯನ್ನು ಘೋಷಣೆ ಮಾಡಿದರು.
ಉತ್ತರ ಕನ್ನಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಶಿವಮೊಗ್ಗದ ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು. ವಾಣಿಜ್ಯ ತೆರಿಗೆ, ನೋಂದಣಿ ಮುದ್ರಾಂಕ, ಅಬಕಾರಿ, ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ ಸೇರಿ ಸಂಪನ್ಮೂಲ ಸಂಗ್ರಹ ಇಲಾಖೆಗಳಿಂದ ಒಟ್ಟು 1,96,525 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಿದ್ದಾರೆ.
ಮದ್ಯದ ಘೋಷಿತ ಸ್ಲಾಬ್ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆರಾಜ್ಯದ ಮದ್ಯದ ಬೆಳವಣಿಗೆಗನುಗುಣವಾಗಿ ದೇಶೀಯವಾಗಿ ತಯಾರಾಗುವ ಮದ್ಯ ಮತ್ತು ಬಿಯರ್ಸ್ ಸ್ಲಾಬ್ಗಳನ್ನು ಪರಿಷ್ಕರಿಸುವುದಾಗಿ ತಿಳಿಸಿದ್ದಾರೆ. ಪರಿಷ್ಕರಣೆಗೊಂಡರೆ ಸಹಜವಾಗಿಯೇ ಅದು ಏರಿಕೆಯಾಗುವ ನಿರೀಕ್ಷೆಯಿದೆ.
ಪ್ರಸಕ್ತ ವರ್ಷ ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನಗಳ ತೆರಿಗೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಈ ಬಜೆಟ್ನಲ್ಲಿ ಅಬಕಾರಿ ಹೊರತುಪಡಿಸಿ ಬೇರೆ ತೆರಿಗೆ ಹೊರೆ ಕಂಡುಬಂದಿಲ್ಲ. ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿಯವರು,
ಆದಾಯದ ಪ್ರಮುಖ ಮೂಲವಾಗಿರುವ ಸರಕು ಮತ್ತು ಸೇವಾ ತೆರಿಗೆಯಲ್ಲಿ 2024-25 ನೇ ಸಾಲಿಗೆ 1.10 ಲಕ್ಷ ಕೋಟಿ ರೂ.ಗಳ ಸಂಗ್ರಹದ ಗುರಿಯನ್ನು ನಿಗದಿ ಮಾಡಲಾಗಿದೆ ಎಂದರು.









