ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ರೈತರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಕಾರ್ಯಾಗಾರ ‘ಕಾಫಿಕೊ’ ಆ.25ರಂದು ಸುಳ್ಯ ಸಿಎ ಬ್ಯಾಂಕ್ನ ಸಭಾಂಗಣದಲ್ಲಿ ನಡೆಯಲಿದೆ. ಹಳದಿ ರೋಗದಿಂದ ಕಂಗೆಟ್ಟ ಅಡಿಕೆ ಬೆಳೆಗಾರರ ನೆರವಿಗೆ ನಿಲ್ಲುವ ಮಹತ್ತರ ಯೋಜನೆಯಾಗಿ ಕಾಫಿ ಬೆಳೆಯನ್ನು ಪ್ರೋತ್ಸಾಹಿಸಲು
ಯೋಜನೆ ರೂಪಿಸಲಾಗಿದೆ. ಲೋಕಸಭಾ ಚುನಾವಣಾ ಪೂರ್ವದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅರಿತಿದ್ದ ಕ್ಯಾಪ್ಟನ್ ಚೌಟ ಅವರು ಸಂಸದರಾದ ಬಳಿಕ ಇದಕ್ಕೆ ಪರ್ಯಾಯವಾಗಿ ಕಾಫಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಇದೀಗ ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ ಬೆಳೆಯುವ ನಿಟ್ಟಿನಲ್ಲಿ ಸಲಹೆ ಮಾರ್ಗದರ್ಶನ ನೀಡಲು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಕೃಷಿಯಲ್ಲಿ ಸುಸ್ಥಿರ ಹಾಗೂ ಲಾಭದಾಯಕ ಪರ್ಯಾಯ ಬೆಳೆಗಳ ಗುರುತಿಸುವಿಕೆ, ಆರ್ಥಿಕ ಭದ್ರತೆ, ಕಾಫಿ ಬೆಳೆಯ ಹೊಸ ಸಾಧ್ಯತೆಗಳ ಅನ್ವೇಷಣೆ, ತಂತ್ರಜ್ಞಾನ ಬಳಸಿ ಗುಣಮಟ್ಟದ ಕಾಫಿ ಉತ್ಪಾದಿಸುವ ಗುರಿ ವಿಶಿಷ್ಟತೆಯ ಕರಾವಳಿ ಕಾಫಿಗಾಗಿ ಪ್ರಯತ್ನ, ವೈಜ್ಞಾನಿಕ, ವಿಶಿಷ್ಟ ಕಾಫಿ ಅಡಿಕೆಗೂ ಮೀರಿ ಮಿಷನ್ ಕರಾವಳಿ ಕಾಫಿಯನ್ನು ತಯಾರಿಸುವ ಬ್ರಾಂಡ್ ಕಾಫಿ ನಿರ್ಮಾಣ ಗುರಿ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕಾಫಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.ಕೃಷಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
ಸುಳ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ರೈತರು ಯಶಸ್ವಿಯಾಗಿ ಕಾಫಿ ಬೆಳೆಯನ್ನು ಬೆಳೆಸುತ್ತಿದ್ದಾರೆ, ಸುಳ್ಯ ತಾಲೂಕಿನಲ್ಲಿಯೂ ಕಾಫಿ ಬೆಳೆಗೆ ಸೂಕ್ತ ವಾತಾವರಣ ಇದೆ. ಇಲ್ಲಿಯೂ ಕಾಫಿ ಕೃಷಿ ಚೆನ್ನಾಗಿ ಬೆಳೆಯಬಲ್ಲುದು. ಈ ನಿಟ್ಟಿನಲ್ಲಿ
ಹಳದಿರೋಗದಿಂದ ಕೃಷಿ ನಾಶವಾದ ಕೃಷಿಕರಿಗೆ ಪರ್ಯಾಯವಾಗಿ ಕಾಫಿ ಬೆಳೆಸುವಲ್ಲಿ ರೈತರಿಗೆ ಆತ್ಮವಿಶ್ವಾಸ ಮೂಡಿಸಲು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.












