ಬೆಂಗಳೂರು: ಕನ್ನಡ ಸಿನಿಮಾ ಲೋಕ ಕಂಡ ಬಿಗ್ ಹಿಟ್ ಸಿನಿಮಾ ‘ಕಾಂತಾರ’ ಚಿತ್ರಕ್ಕೆ ಎರಡನೇ ಭಾಗ ಬರುತಿದೆ. ಈ ಹಿನ್ನಲೆಯಲ್ಲಿ ಸಿನಿ ಪ್ರಿಯರಲ್ಲಿ ಕುತೂಹಲ ಗರಿಗೆದರಿದೆ. ಕಾಂತಾರ 2 ಸಿನಿಮಾ ಶೂಟಿಂಗ್ ಶುರುವಿನ ಬಗ್ಗೆ ಆಗೊಂದು, ಈಗೊಂದು ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ, ಯಾವುದೂ ಅಧಿಕೃತ ಆಗಿರಲಿಲ್ಲ. ಈಗ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಈ ಬಗ್ಗೆ ಮಾಹಿತಿ ಸಿಕ್ಕಿದೆ. ‘ಕಾಂತಾರ 2’ ಚಿತ್ರದ ಫಸ್ಟ್
ಪೋಸ್ಟರ್ ನವೆಂಬರ್ 27ರ ಮಧ್ಯಾಹ್ನ 12:25ಕ್ಕೆ ಅನಾವರಣಗೊಳ್ಳಲಿದೆ.
‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಗೆದ್ದಿದ್ದರು. ಎರಡು ಶೇಡ್ನ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಅವರ ನಟನೆ, ಹಾವ-ಭಾವ ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿದ್ದರು. ಈಗ ಈ ಚಿತ್ರಕ್ಕೆ ಎರಡನೇ ಪಾರ್ಟ್ ಬರುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.
‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವುದರ ಜೊತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ. ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ನವೆಂಬರ್ 27, ಮಧ್ಯಾಹ್ನ 12:25ಕ್ಕೆ’ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ.
ಟೈಟಲ್ ಕಾರ್ಡ್ನಲ್ಲಿ ಕೇವಲ ‘ಕಾಂತಾರ’ ಎಂದಷ್ಟೇ ಇದೆ. ‘ಕಾಂತಾರ ಚಾಪ್ಟರ್ 1’ ಎಂದು ಹ್ಯಾಶ್ಟ್ಯಾಗ್ ಹಾಕಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ರಿಷಬ್ ಶೆಟ್ಟಿ ಅವರ ಹೊಸ ಅವತಾರ ನೋಡಲು ಫ್ಯಾನ್ಸ್ ಕಾದಿದ್ದಾರೆ. ಇದಕ್ಕೆ ಸೋಮವಾರದವರೆಗೆ ಕಾಯಲೇಬೇಕು. ‘ಕಾಂತಾರ 2’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ನಲ್ಲಿ ರಿಲೀಸ್ ಆಗಲಿದೆ.









