ಸುಳ್ಯ:ಕನ್ನಡದ ಬಗ್ಗೆ ಪ್ರೀತಿ ಇರುವುದರ ಜೊತೆಗೆ ಇತರ ಭಾಷೆಗಳನ್ನು ಗೌರವಿಸಬೇಕು. ನಾವು ಭಾಷಾ ಪ್ರೇಮ ಬೆಳೆಸಿಕೊಳ್ಳಬೇಕು ಆದರೆ ಭಾಷಾಂಧತೆ ಬೇಡ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ
ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ನಡೆದ ಒಂದು ದಿನದ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕನ್ನಡದ ಅಭಿವೃದ್ಧಿಗೆ ಪ್ರಾಧಿಕಾರ ಸಾಕಷ್ಟು ಕೆಲಸ ಮಾಡುತಿದೆ.ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡಲಾಗುವುದು ಎಂದು ಅವರು ಹೇಳಿದರು.ಪ್ರಭುತ್ವದ ಭಾಷೆಯಾದ
ಕನ್ನಡ ಆಡಳಿತ ಭಾಷೆಯಾದರೆ ಜನಮಾನಸಕ್ಕೆ ಸುಲಭವಾಗಿ ಮುಟ್ಟುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತಿದೆ, ಆದರೆ ಶೇ.100 ಯಶಸ್ಸು ಆಗಿಲ್ಲ ಎಂದು ಅವರು ಹೇಳಿದರು. ಭಾಷೆಯ ಬೆಳವಣಿಗೆ, ಕನ್ನಡ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ವಸ್ತು ನಿಷ್ಠವಾದ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.ಮುಂದಿನ 10 ವರ್ಷಗಳಲ್ಲಿ ಕನ್ನಡವನ್ನು ಹೇಗೆ ಸಬಲೀಕರಣ ಮಾಡಬಹುದು ಎಂಬ ನಿಟ್ಟಿನಲ್ಲಿ ಪ್ರಾಧಿಕಾರ ಕೆಲಸ ಮಾಡುತಿದೆ ಎಂದರು.

ಪಠ್ಯ ಪುಸ್ತಕದ ವಸ್ತು ಹಾಗು ಜನರ ಮಧ್ಯೆ ಸಾಕಷ್ಟು ವ್ಯತ್ಯಾಸ ಇರುವುದರಿಂದ ಕನ್ನಡ ಕಲಿಯುವುದೇ ಕಷ್ಟ ಎಂಬ ಭಾವನೆ ಬಂದಿದೆ, ಕನ್ನಡಿಗರೇ ಇಂಗ್ಲೀಷ್ ಪರವಾಗಿರುವ ಸ್ಥಿತಿ ಉಂಟಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ 290 ಭಾಷೆಗಳಿವೆ, ಸ್ವಾತಂತ್ರ್ಯಾ ನಂತರ ದೇಶದಲ್ಲಿ 254 ಭಾಷೆಗಳು ನಾಶವಾಗಿದೆ, ಮುಂದಿನ 30 ವರ್ಷದಲ್ಲಿ 390 ಭಾಷೆಗಳು ನಾಶವಾಗುವ ಅಪಾಯ ಇದೆ, 70 ವರ್ಷಗಳಲ್ಲಿ ಜಗತ್ತಿನ ಶೇ.8 ಮಂದಿಯ ಭಾಷೆಯನ್ನು ಉಳಿದ ಶೇ.92 ಮಂದಿಯೂ ಮಾತನಾಡುವ ಸ್ಥಿತಿ ಎಂದು ಬರಬಹುದು ಅಧ್ಯಯನಗಳು ಹೇಳಿದೆ ಎಂದು ಡಾ.ಬಿಳಿಮಲೆ ಉಲ್ಲೇಖಿಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಮುಖ್ಯ ಅತಿಥಿಯಾಗಿದ್ದರು.
ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಧುರ ಎಂ.ಆರ್.ವಂದಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು.









