ಪುತ್ತೂರು: ಕಾಂಞಂಗಾಡ್- ಕಾಣಿಯೂರು ರೈಲ್ವೇ ಹಳಿ ನಿರ್ಮಾಣ ಯೋಜನೆಯು ನೆನೆಗುದಿಗೆ ಬಿದ್ದಿದ್ದು ಈ ವಿಚಾರದಲ್ಲಿ ಕರ್ನಾಟಕ ಸರಕಾರದ ಜೊತೆ ಮಾತುಕತೆ ನಡೆಸುವ ಉದ್ದೇಶದಿಂದ ರೈಲ್ವೇ ಹಳಿ ನಿರ್ಮಾಣ ಕ್ರಿಯಾ ಸಮಿತಿ ಪದಾಧಿಕಾರಿಗಳು ಪುತ್ತೂರು ಶಾಸಕರಾದ ಅಶೋಕ್ ರೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಈ ವಿಚಾರದಲ್ಲಿ
ಚರ್ಚೆ ನಡೆಸುವ ಸಲುವಾಗಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.2008 ರಲ್ಲಿ ಕಾಂಞಂಗಾಡ್- ಕಾಣಿಯೂರು ರೈಲ್ವೇ ಹೊಸ ಮಾರ್ಗಕ್ಕೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿತ್ತು. ಬಳಿಕ ಸರ್ವೇ ನಡೆಸಿ 1350 ಕೋಟಿ ರೂ ಯೋಜನೆಯ ರೂಪುರೇಷೆ ತಯಾರಿಸಲಾಗಿತ್ತು. ಇದರಲ್ಲಿ ಶೇ.50 ಕೇಂದ್ರ ಸರಕಾರ ಉಳಿದ ಶೇ.50 ಕೇರಳ ಹಾಗೂ ಕರ್ನಾಟಕ ರಾಜ್ಯಗಳು ಭರಿಸಬೇಕು. ಕೇರಳ ಸರಕಾರ ಈಗಾಗಲೇ 325 ಕೋಟಿ ರೂ ಅನುದಾನವನ್ನು ನೀಡಲು ಒಪ್ಪಿದೆ. ಆದರೆ ಕರ್ನಾಟಕ ಸರಕಾರದಿಂದ ಒಪ್ಪಿಗೆ ಸಿಕ್ಕಿಲ್ಲ. ಅನುದಾನದ ಬಗ್ಗೆ ಇನ್ನೂ ಕರ್ನಾಟಕ ಸರಕಾರದ ಜೊತೆ ಮಾತುಕತೆ ನಡೆದಿಲ್ಲ. ಈ ಹಿನ್ನಲೆಯಲ್ಲಿ ಸರಕಾರದ ಜೊತೆ ಮಾತುಕತೆ ನಡೆಸುವ ನಿಟ್ಟಿನಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ರೈಲ್ವೇ ಹಳಿ ನಿರ್ಮಾಣ ಕ್ರಿಯಾ ಸಮಿತಿ ಮತ್ತು ಶಾಸಕ ಅಶೋಕ್ ರೈ ಅವರು ಜಂಟಿಯಾಗಿ ಸಿ ಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಂಞಂಗಾಡ್- ಮೀಙೋತ್- ಕೊಟ್ಟೋಡಿ-ಬಳಾಂತೋಡು- ಪಾಣತ್ತೂರು-ಕಲ್ಲಪಳ್ಳಿ ಮೂಲಕ ಸುಳ್ಯ-ಬೆಳ್ಳಾರೆ- ಕಾಣಿಯೂರುಗೆ ಸುಮಾರು 91 ಕಿ.ಮಿ. ಉದ್ದದ ಈ ರೈಲ್ವೇ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಈ ರೈಲ್ವೇ ಮಾರ್ಗಕ್ಕೆ 1350 ಕೋಟಿ ಅನುದಾನ ಬೇಕಾಗುತ್ತದೆ. ಕೇಂದ್ರ ಸರಕಾರ, ಕೇರಳ ಮತ್ತು ಕರ್ನಾಟಕ ಸರಕಾರ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ನಿಯೋಗದಲ್ಲಿ ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ನಿರ್ಮಾಣ ಕ್ರಿಯಾ ಸಮಿತಿಯ ಸೂರ್ಯನಾರಾಯಣ ಭಟ್, ಬೆಟ್ಟ ಜಯರಾಂ ಭಟ್, ಎಂ.ಸಿ. ಜೋಸ್, ಎ.ಹಮೀದ್ ಹಾಜಿ, ಕುಂಞಿ ಕಣ್ಣನ್, ಮೊಹಮ್ಮದ್ ಉಪಸ್ಥಿತರಿದ್ದರು.
ಕೇರಳ ಮತ್ತು ಕರ್ನಾಟಕದ ಮೂಲಕ ಹಾದು ಹೋಗುವ ಈ ರೈಲು ಮಾರ್ಗಕ್ಕೆ ಕೇಂದ್ರದ ಜೊತೆ ಎರಡು ಸರಕಾರಗಳು ಕೈಜೋಡಿಸಬೇಕಿದೆ. ಈ ಯೋಜನೆ ಜಾರಿಯಾದಲ್ಲಿ ಕೇರಳ ಮತ್ತುಕರ್ನಾಟಕಕ್ಕೆ ಕೊಂಡಿಯಾಗಿ ಕೆಲಸ ಮಾಡಲಿದೆ. ಸುಬ್ರಹ್ಮಣ್ಯ ಮತ್ತು ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಇದು ಪ್ರಯೋಜನವನ್ನು ನೀಡಲಿದೆ. ಈ ವಿಚಾರದಲ್ಲಿ ಕೇರಳದ ನಿಯೋಗವೊಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಮುಂದಿನ ವಾರ ಬೆಂಗಳೂರಿನಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದ್ದಾರೆ.