*ಚಿತ್ರ-ವರದಿ:ಪದ್ಮನಾಭ ಸುಳ್ಯ.
ಕಲ್ಮಕಾರು: ಸುಳ್ಯ ತಾಲೂಕಿನ ಕಲ್ಮಕಾರು ಪ್ರದೇಶದ ಕಡಮಕಲ್ ಎಸ್ಟೆಟ್ ಮತ್ತು ಮಡಿಕೇರಿ ಭಾಗದದಲ್ಲಿ ಭಾರೀ ಪ್ರಮಾಣದಲ್ಲಿ ಸೋಮವಾರ ಸಂಜೆ ಭೂಸ್ಫೋಟಗೊಂಡಿದ್ದು ಹರಿಹರ ಪಲ್ಲತಡ್ಕ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅಪಾರ ಹಾನಿ ಸಂಭವಿಸಿದೆ. ಧಾರಾಕಾರವಾಗಿ ಸುರಿದ ರಣ ಭೀಕರ ಮಳೆಯಿಂದ ಹಲವು ಭಾಗಗಳು ಅಕ್ಷರಷಃ ದ್ವೀಪವಾಗಿದ್ದು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಲ ಪ್ರವಾಹಕ್ಕೆ ಕಲ್ಮಕಾರು ಮತ್ತು ಮೇಲಿನ ಪ್ರದೇಶಗಳಿಂದ ಅಪಾರ
ಪ್ರಮಾಣದಲ್ಲಿ ಬೃಹತ್ ಗಾತ್ರದ ಮರಗಳು, ಕಲ್ಲುಬಂಡೆಗಳು ಕೊಚ್ಚಿಕೊಂಡು ಬಂದು ಹರಿಹರ ಪಲ್ಲತಡ್ಕ ಸೇತುವೆಗೆ ಸಿಲುಕಿ ಬ್ಲಾಕ್ ಆಗಿದೆ. ಬಾಳುಗೋಡು ಪ್ರದೇಶಕ್ಕೆ ಸಂಪರ್ಕ ಸೇತುವೆ ಇಕ್ಕೆಲಗಳಲ್ಲಿ ತಡೆಗೋಡೆಗಳು ಸಂಪೂರ್ಣ ಕೊಚ್ಚಿಹೋಗಿದೆ. ಇದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಹರಿಹರ ಪಲ್ಲತಡ್ಕ ಪೇಟೆಗಳಿಗೆ ಕೆಸರು ಮಿಶ್ರಿತ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಪೇಟೆಯಲ್ಲಿ ಸುಮಾರು ೨೦ಕ್ಕೂ ಅಧಿಕ ಅಂಗಡಿಗಳಿಗೆ ಪ್ರವಾಹದ ನೀರು ನುಗ್ಗಿದೆ. ಹಲವು ಅಂಗಡಿಗಳಲ್ಲಿನ ವಸ್ತುಗಳು ಪ್ರವಾಹದ ನೀರಿಗೆ ಅಹುತಿಯಾಗಿದೆ. ಮೊಹನ್ ಕಳಿಗೆ ಅವರ ದಿನಸಿ ಅಂಗಡಿ, ಸೋಮಶೇಖರ್ ಅವರ ಎಲೆಕ್ಟಾçನಿಕ್ಸ್ ಅಂಗಡಿ ಮತ್ತು ಹಾರ್ಡ್ವೇರ್ ಅಂಗಡಿ ಸೇರಿ ಅಡಿಕೆ ಖರೀದಿ ಕೇಂದ್ರದಲ್ಲಿದ್ದ ಅಡಿಕೆ ಮತ್ತು ಕಾಳು ಮೆಣಸು ನೀರು ಪಾಲಾಗಿದೆ. ಅಂಗಡಿ ಮತ್ತು ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು ಕೆಟ್ಟುಹೋಗಿದೆ.
ಪ್ರವಾಹಕ್ಕೆ ಹರಿಹರ ಪಲ್ಲತಡ್ಕದಲ್ಲಿ ನದಿ ತಟದಲ್ಲಿದ್ದ ೫ ಅಂಗಡಿಗಳು ಕೊಚ್ಚಿಹೋಗಿದೆ. ಮೋಹನ್ ಎಂಬವರ ಹೋಟೆಲ್, ಬಾಲಚಂದ್ರ ಅವರ ದಿನಸಿ ಅಂಗಡಿ, ದೇವದಾಸ್ ಎಂಬವರ ಸೆಲೋನ್ ಅಂಗಡಿ ಮತ್ತು ಮನೆಗೆ ಕೂಡ ಪ್ರವಾಹದ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ. ಪ್ರಕಾಶ್ ಎಂಬವರ ಫ್ಯಾಸ್ಸಿ ಸ್ಟೋರ್, ಮೋಹನ್ ದಾಸ್ ಅವರ ದಿನಸಿ ಅಂಗಡಿಗಳು ಜಲಪ್ರವಾಹಕ್ಕೆ ಅಹುತಿಯಾಗಿದೆ. ಹರಿಹರ ಪಲ್ಲತಡ್ಕದ ಪೇಟೆಗೆ ಕೆಸರು ನೀರು ನುಗ್ಗಿದ್ದು ಸುಮಾರು ೨೫ ಕ್ಕೂ ಹೆಚ್ಚು ಅಂಗಡಿಗಳಿಗೆ ಮತ್ತು ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಬಾಳುಗೋಡು ಸಂಪರ್ಕ ಬಂದ್ : ಸೋಮವಾರ ಸಂಜೆ ಉಂಟಾಗ ಜಲಸ್ಫೋಟ ಸಂದರ್ಭದಲ್ಲಿ ಹರಿಹರ ಪಲ್ಲತಡ್ಕ ಮತ್ತು ಬಾಳುಗೋಡು ಪ್ರದೇಶಗಳಿಗೆ ಇದ್ದ ಪ್ರದೇಶಗಳಿಗೆ ತೆರಳಿದ ಬಸ್ಸುಗಳು, ಶಾಲಾ ವಾಹನಗಳು, ಹಲವಾರು ಮಂದಿ, ಸಂಪರ್ಕ ಕಡಿತಗೊಂಡ ಕಾರಣ ಉಳಿದ ಕಡೆಯಲ್ಲೇ ರಾತ್ರಿ ಕಳೆದರು. ೨ ಕೆಎಸ್ಆರ್ಟಿಸಿ ಬಸ್ಸುಗಳು ಅಲ್ಲೇ ಬಾಕಿತ್ತು.
ಕ್ರೇನ್ ಮೂಲಕ ಮರಗಳ ತೆರವು : ಜಲ ಪ್ರವಾಹಕ್ಕೆ ಕೊಚ್ಚಿ ಬಂದ ಬೃಹತ್ ಮರಗಳನ್ನು ತೆರವು ಕಾರ್ಯ ನಡೆಯಿತು. ಹರಿಹರ ಪಲ್ಲತಡ್ಕ, ಬೆಂಡೋಡಿ, ಗುಂಡಡ್ಕ ಸೇತುವೆ, ಸಂತಡ್ಕ ಮುಂತಾದ ಸೇತುವೆಗಳಲ್ಲಿ ಸಿಲುಕಿದ್ದ ಮರಗಳನ್ನು ವಿಪತ್ತು ನಿರ್ವಹಣಾ ತಂಡ, ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ಸ್ಥಳಿಯರು ಸೇರಿ ಕ್ರೇನನ್ಗಳ ಮೂಲಕ ಮರಗಳನ್ನು ತೆಗೆಯುವ ಕಾರ್ಯ ನಡೆಯಿತು.
ನೀರು ಪಾಲಾದ ಸಂತಡ್ಕ
ಸೇತುವೆ : 250 ಕುಟುಂಬಗಳ ಸಂಪರ್ಕ ಕಡಿತ :
ಭಾರೀ ಮಳೆಗೆ ಕಲ್ಮಕಾರಿನ ಸಂತೆಡ್ಕ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿ ನೀರು ಪಾಲಾಗಿದೆ. ಆ ಭಾಗದ ಜನಗಳ ಸಂಪರ್ಕ ಕಡಿತಗೊಂಡಿದೆ. ಆ ಪ್ರದೇಶಗಳಲ್ಲಿ ಬರುವ ಬೈಲು, ಕೊಪ್ಪಡ್ಕ, ದಬ್ಬಡ್ಕ, ಗಿಳಿಕ್ಕಾನ, ಕಿನ್ನಾನ, ಕಾಜಿಮಡ್ಕ, ಗುಡ್ಡನಾ ಮತ್ತು ಅಜ್ಜನಕಜೆ ಪ್ರದೇಶಗಳಲ್ಲಿ ಇರುವ ಸುಮಾರು 250 ಕುಟುಂಬಗಳು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿದೆ. ಇದರಿಂದ ಶಾಲೆಗೆ ಹೋಗುವ ಮಕ್ಕಳು, ವೃದ್ದರು, ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಹೊಳೆಯಿಂದ ಆಚೆ ಪ್ರದೇಶಕ್ಕೆ ತೆರಳಿದ ಹಲವು ವಾಹನಗಳು ಇತ್ತ ಬರಲಾಗದೇ ಅಲ್ಲೇ ಬಾಕಿಯಾಗಿದೆ. ಕಲ್ಮಕಾರಿನಲ್ಲಿ ಪ್ರವಾಹದ ಮಾದರಿಯಲ್ಲಿ ನೀರು ಹರಿದಿದೆ. ಕಲ್ಮಕಾರು ಪೇಟೆಯ ಸಮೀಪದವರೆಗೂ ಹೊಳೆಯ ನೀರು ಹರಿದಿದ್ದು
ದಿನೇಶ್ ಕೊಪ್ಪಡ್ಕ ಹೇಮಲತಾ ಮತ್ತು ಹೇಮಚಂದ್ರ ಅವರ ಅಂಗಡಿಗಳಿಗೆ ಕೆಸರು ನೀರು ನುಗ್ಗಿದೆ. ನಿನ್ನೆಯಿಂದ ಕಲ್ಮಕಾರು ಪ್ರದೇಶ ಸಂಪರ್ಕ ಕಡಿತಗೊಂಡಿದೆ. ಎಲ್ಲಾ ಹೊಳೆ, ನದಿಗಳೂ ತುಂಬಿ ಹರಿದಿದೆ
ಹರಿಹರ ಸಮೀಪದ ಬೆಂಡೋಡಿ ಸೇತುವೆ ಮುಳುಗಡೆಯಾಗಿದ್ದು ಸಂಪರ್ಕ ಕಡಿತವಾಗಿದೆ. ಸೇತುವೆಯ ಒಂದು ಬದಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದ್ದು ಹಲವು ಮನೆಯವರಿಗೆ ಸಂಪರ್ಕ ಇಲ್ಲದಂತಾಗಿದೆ.
ಕಡಂಬಳ ಸೇತುವೆ ಮುರಿತ -40 ಮನೆ ಸಂಪರ್ಕ ಕಡಿತ : ಕೊಲ್ಲಮೊಗ್ರ ಗ್ರಾಮದ ಕಡಂಬಳ ಎಂಬಲ್ಲಿ ಮಳೆ ನೀರಿಗೆ ಸೇತುವೆ ಮುರಿದು ಬಿದ್ದಿದೆ. ಪರಿಣಾಮ ಪೆರ್ನಾಜೆ, ಕಡಂಬಳ ಭಾಗದ 40 ಮನೆಗಳು ಸಂಪರ್ಕ ಕಡಿದು ಕೊಂಡಿವೆ.
ಭಾರೀ ಮಳೆಗೆ ಮನೆ ಕುಸಿತ: ಕೊಲ್ಲಮೊಗ್ರದ ಹೇಮಂತ್ ಚಾಲೆಪ್ಪಾಡಿ ಎಂಬವರ ಮನೆ ಸಂಪೂರ್ಣ ಧರಾಶಾಯಿಯಾಗಿದ್ದು, ಒಂದು ಜಾನುವಾರು ಮೂರು ನಾಯಿಗಳು ಸತ್ತಿದೆ. ಅಲ್ಲದೇ ದೋಲನ ಎಂಬಲ್ಲಿ ಭಾರಿ ಮಳೆಗೆ ಮನೆ ಕುಸಿದಿದೆ.
ಕಲ್ಮಕಾರು ಪ್ರದೇಶದಲ್ಲಿ ವ್ಯಾಪಕ ಹಾನಿ : ಜಲಸ್ಫೋಟ ಮತ್ತು ಜಲಪ್ರವಾಹದಿಂದ ಕಲ್ಮಕಾರು ಪ್ರದೇಶ ವ್ಯಾಪಕವಾಗಿ ಹಾನಿಗೊಂಡಿದೆ. ಡ್ಯಾನಿ ಕಲ್ಮಕಾರು ಅವರ ಮನೆಗೆ ಹಾನಿಯಾಗಿದೆ. ಅಲ್ಲದೇ ಎಲದಾಳು ಪ್ರದೇಶದಲ್ಲಿ ಇರುವ ಸೇತುವೆಗೆ ಹಾನಿಯಾಗಿದ್ದು 4 ಮನೆಗಳಿಗೆ ಇರುವ ಸಂಪರ್ಕ ಕಳೆದುಕೊಂಡಿದೆ. 2018ರಲ್ಲಿ ಈ ಸೇತುವೆ ಕೊಚ್ಚಿಹೋಗಿತ್ತು. ಕಡಮಕಲ್ ಎಸ್ಟೆಟ್ಗೆ ತೆರಳುವ ರಸ್ತೆಯಲ್ಲಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಬಂದ್ ಆಗಿದೆ.
ಹಲವು ಏಕರೆ ಕೃಷಿ ಭೂಮಿ ನೀರು ಪಾಲು : ಕಲ್ಮಕಾರು ಪ್ರದೇಶದಲ್ಲಿ ಹೊಳೆ ಹರಿಯುವ 2 ಕಡೆ ಹಲವು ಏಕರೆ ಕೃಷಿ ಭೂಮಿ ನೀರಲ್ಲಿ ಕೊಚ್ಚಿ ಹೋಗಿದೆ. ದೋಲನ ಮನೆ ಎಂಬಲ್ಲಿ ಸುಮಾರು 2 ಎಕ್ರೆಗೂ ಕೃಷಿ ಭೂಮಿ ನದಿಯ ಕೊರೆತದಿಂದ ಕೃಷಿ ಭೂಮಿಯಲ್ಲಿ ಹೊಳೆಯಾಗಿದೆ. ಹರಿಹರ ಪಲ್ಲತಡ್ಕದಲ್ಲಿ ಡಾ. ಗಿರೀಶ್ ಅವರ ತೋಟ ನೀರಿನ ಪ್ರವಾಹಕ್ಕೆ ಕೊಚ್ಚಿಹೋಗಿದೆ. ಕೊಲ್ಲಮೊಗ್ರದ ಹೇಮಂತ್ ಅವರ ಸುಮಾರು 3 ಏಕರೆ ಅಡಿಕೆ ತೋಟ ನೀರು ಪಾಲಾಗಿದೆ. ಕಲ್ಮಕಾರಿನ ಸಂತಡ್ಕದಲ್ಲಿ ಸೂರ್ಯ ಭಟ್, ರಮೇಶ್, ಯತೀಶ್, ಜಗದೀಶ್ ಅವರ ತೋಟಗಳಿಗೆ ಹಾನಿಯಾಗಿದೆ.
ಅಲ್ಲಲ್ಲಿ ರಸ್ತೆ ಬದಿ ಗುಡ್ಡ ಕುಸಿತ :
ಕೆಲವು ದಿನಗಳಿಂದ ಸುರಿಯುತ್ತರಿವ ಮಳೆಯಿಂದಾಗಿ ಹಲವು ಕಡೆ ಗುಡ್ಡ ಕುಸಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಡುಗಲ್ಲು ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು ಸುಳ್ಯ – ಸುಬ್ರಹ್ಮಣ್ಯ ರಸ್ತೆ ಬಂದ್ ಆಗಿತ್ತು. ಅಲ್ಲದೇ ಕೊಲ್ಲಮೊಗ್ರ, ಹರಿಹರ ಪಲ್ಲತಡ್ಕ ಮತ್ತು ಹರಿಹರ ಪಲ್ಲತಡ್ಕ ಮತ್ತು ಕಲ್ಮಕಾರುಗಳಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 30 ಕ್ಕೂ ಹೆಚ್ಚಿನ ಕಡೆ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.