ಸುಳ್ಯ: ಸುಳ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆಯಲಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಸುಳ್ಯ ರೆಡಿ.. ರೆಡಿ. ನ.17 ರಿಂದ 19 ರ ತನಕ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ಗೆ ಸುಳ್ಯ ಸರ್ವ ಸನ್ನದ್ಧವಾಗಿದೆ. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಕಬಡ್ಡಿ ಉತ್ಸವ ಚೆನ್ನಕೇಶವ ದೇವಸ್ಥಾನದ ಬಳಿಯ


ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯಾಟಕ್ಕೆ ಆಕರ್ಷಕ ಮ್ಯಾಟ್ ಅಂಕಣ ಸಿದ್ಧಗೊಂಡಿದೆ. ಅಂಕಣಕ್ಕೆ ಕಣ್ಮನ ಸೆಳೆಯುವ ಆಕರ್ಷಕ ಲೈಟಿಂಗ್ಸ್ ಅಳವಡಿಸಲಾಗಿದೆ.
ಕ್ರೀಡಾಂಗಣ ಪೂರ್ತಿ ವರ್ಣಮಯವಾದ ಲೈಟಿಂಗ್ಸ್ ಮನ ಸೆಳೆಯುತಿದೆ. ಎಲ್ಲೆಡೆ ದೀಪಾಲಂಕಾರ ಪ್ರಭೆ ಸೂಸುತಿದೆ. ಚೆನ್ನಕೇಶವ ದೇವಾಲಯದ ಬಳಿಯಿಂದ ಕ್ರೀಡಾಂಗಣದ ತನಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕಬಡ್ಡಿ ಸಂಘಟನಾ ಸಮಿತಿ ಕಚೇರಿ, ಒಳಾಂಗಣ ಕ್ರೀಡಾಂಗಣ ಸಂಪೂರ್ಣ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ನ.17ರಂದು 3 ಗಂಟೆಗೆ ಜ್ಯೋತಿ ವೃತ್ತದಿಂದ ಕ್ರೀಡಾಂಗಣದ ತನಕ

ಕ್ರೀಡಾಪಟುಗಳ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಪಂದ್ಯಾಟದ ಉದ್ಘಾಟನೆ ನಡೆಯಲಿದೆ. ಕಬಡ್ಡಿ ಪಂದ್ಯಾಟದಲ್ಲಿ 3 ದಿನಗಳಲ್ಲಿ 29 ಪಂದ್ಯಗಳು ನಡೆಯಲಿದೆ. ನ.17ರಂದು 8 ಪಂದ್ಯ, ನ.18ರಂದು 10 ಪಂದ್ಯ, 19 ರಂದು ಸೆಮಿ ಫೈನಲ್ ಹಾಗೂ ಫೈನಲ್ ಸೇರಿ 11 ಪಂದ್ಯ ನಡೆಯಲಿದೆ.12 ಪುರುಷ ತಂಡಗಳು ಹಾಗೂ 4 ಮಹಿಳಾ ತಂಡಗಳು ಭಾಗವಹಿಸಲಿದೆ. ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಸುಸಜ್ಜಿತ ಮ್ಯಾಟ್ ಅಂಕಣ, 4 ಸಾವಿರ ಮಂದಿಗೆ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಾಣ,1000 ಮಂದಿ ಕುಳಿತುಕೊಳ್ಳುವ ವಿಐಪಿ ಗ್ಯಾಲರಿ ನಿರ್ಮಾಣ ಮಾಡಲಾಗಿದೆ.











