ಸುಳ್ಯ:ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ 2023 ನ.17ರಿಂದ 19ರ ತನಕ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನಡೆಯಲಿದೆ. ಭರ್ಜರಿ ಪಂದ್ಯಾಕೂಟಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತಿದೆ ಎಂದು ಸಂಘಟನಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ

ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿ
ಅಧ್ಯಕ್ಷ ಸಂಶುದ್ದೀನ್ ಜಿ.ಪಿ(ಭಾರತ್ ಶಾಮಿಯಾನ) ಹಾಗೂ ಹಿರಿಯರಾದ ಜಿ.ಜಿ.ನಾಯಕ್ ಅವರು ಪಂದ್ಯಾಕೂಟದ ಮಾಹಿತಿ ನೀಡಿದರು. ನ.17ರಂದು 3 ಗಂಟೆಗೆ ಜ್ಯೋತಿ ವೃತ್ತದಿಂದ ಕ್ರೀಡಾಂಗಣದ ತನಕ ಕ್ರೀಡಾಪಟುಗಳ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಪಂದ್ಯಾಟದ ಉದ್ಘಾಟನೆ ನಡೆಯಲಿದೆ. ಚಾಂಪಿಯನ್ಶಿಪ್ ಉದ್ಘಾಟನೆಯನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ನೆರವೇರಿಸುವರು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ಸ್ಟೇಡಿಯಂ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸುವರು. ಸಭಾ ಕಾರ್ಯಕ್ರಮವನ್ನು ಸಂಸದ ನಳಿನ್ಕುಮಾರ್ ಕಟೀಲ್ ಉದ್ಘಾಟಿಸುವರು. ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಚಾಂಪಿಯನ್ಶಿಪ್ ಟ್ರೋಫಿ ಅನಾವರಣ ಮಾಡುವರು. ಪ್ರತಿ ದಿನ ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ನಿಗದಿತ ಸಮಯಕ್ಕೆ ಪಂದ್ಯಾಟ ಆರಂಭ ನಡೆಯಲಿದೆ ಎಂದರು.
ಒಟ್ಟು 29 ಪಂದ್ಯಗಳು:
ಕಬಡ್ಡಿ ಪಂದ್ಯಾಟದಲ್ಲಿ 3 ದಿನಗಳಲ್ಲಿ 29 ಪಂದ್ಯಗಳು ನಡೆಯಲಿದೆ. ನ.17ರಂದು 8 ಪಂದ್ಯ, ನ.18ರಂದು 10 ಪಂದ್ಯ, 19 ರಂದು ಸೆಮಿ ಫೈನಲ್ ಹಾಗೂ ಫೈನಲ್ ಸೇರಿ 11 ಪಂದ್ಯ ನಡೆಯಲಿದೆ ಎಂದು ಅವರು ವಿವರಿಸಿದರು.
ತಂಡಗಳು:
12 ಪುರುಷ ತಂಡಗಳು ಹಾಗೂ 4 ಮಹಿಳಾ ತಂಡಗಳು ಭಾಗವಹಿಸಲಿದೆ.ಪುರುಷರ ವಿಭಾಗದಲ್ಲಿ ಬಿಬಿಡಿ ಹರಿಯಾಣ, ಎಸ್ಎಸ್ಎ ದೆಹಲಿ, ಎನ್ಸಿಆರ್ ದೆಹಲಿ, ಟಿಎಂಸಿ ಥಾಣೆ, ಇಎಸ್ಐ ದೆಹಲಿ, ಬ್ಯಾಂಕ್ ಆಫ್ ಬರೋಡಾ, ಬೆಂಗಳೂರು ಸ್ಪೋರ್ಟ್ಸ್ ಕ್ಲಬ್, ದೊರೈಸಿಂಗಂ ತಮಿಳುನಾಡು, ಐಸಿಎಫ್ ಚೆನ್ನೈ, ಜೆ.ಕೆ.ಅಕಾಡೆಮಿ ಕೇರಳ, ಗುಜರಾತ್ ಇನ್ಕಂ ಟ್ಯಾಕ್ಸ್ ತಂಡಗಳು ಭಾಗವಹಿಸಲಿದೆ. ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಮಹಿಳಾ ವಿಭಾಗದಲ್ಲಿ

ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ತಮಿಳುನಾಡು ತಂಡಗಳು ಭಾಗವಹಿಸಲಿದೆ ಎಂದು ಮಾಹಿತಿ ನೀಡಿದರು.
ಇಂಡೋರ್ ಸ್ಟೇಡಿಯಂ:
ಮಳೆಯಿಂದ ಯಾವುದೇ ಸಮಸ್ಯೆ ಆಗದಂತೆ ಸಂಪೂರ್ಣ ಇಂಡೋರ್ ಸ್ಟೇಡಿಯಂ ನಿರ್ಮಾಣ ಮಾಡಲಾಗುವುದು. ಸುಸಜ್ಜಿತ ಮ್ಯಾಟ್ ಅಂಕಣ, 4 ಸಾವಿರ ಮಂದಿಗೆ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಾಣ,1000 ಮಂದಿ ಕುಳಿತುಕೊಳ್ಳುವ ವಿಐಪಿ ಗ್ಯಾಲರಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು. ಪ್ರೊ ಮಾದರಿಯಲ್ಲಿ ನಡೆಯುವ ಪಂದ್ಯಾಕೂಟಕ್ಕೆ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲಾಗುವುದು ಎಂದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಪ್ರೊ ಕಬಡ್ಡಿ ಆಟಗಾರರು ಭಾಗವಹಿಸಲಿದ್ದಾರೆ ಎಂದರು.
ಅದೃಷ್ಟ ಚೀಟಿ ಡ್ರಾ 19ಕ್ಕೆ:
ಪಂದ್ಯಾಕೂಟದ ಪ್ರಯುಕ್ತ ಅದೃಷ್ಠ ಚೀಟಿಯನ್ನು ಹೊರತರಲಾಗಿದೆ. 100 ರೂ ಕೂಪನ್ಗೆ ಪ್ರಥಮ ಬಹುಮಾನವಾಗಿ ಸ್ಕೂಟರ್ ಹಾಗೂ ಇತರ ಬಹುಮಾನ ನೀಡಲಾಗುವುದು. ಇದರ ಡ್ರಾ.ನ.19ರಂದು ನಡೆಸಲಾಗುವುದು ಎಂದು ಹೇಳಿದರು.
ಪಂದ್ಯಾಕೂಟದ ಟಿಕೆಟ್ ಲಭಿಸುವ ಸ್ಥಳ:
ಪಂದ್ಯಾಟದ ಟಿಕೆಟ್ ಸುಳ್ಯದ ಸಂಘಟನಾ ಸಮಿತಿಯ ಕಚೇರಿ, ಕಲ್ಲುಗುಂಡಿ ಎಸ್ಪಿ ಲೋಕನಾಥ್ ಅವರ ಶಾಮಿಯಾನ ಕಚೇರಿಯಲ್ಲಿ, ಬೆಳ್ಳಾರೆ ಸ್ಟಾಂಡರ್ಡ್ ಮೈಕ್ ಹಾಗೂ ಸುಬ್ರಹ್ಮಣ್ಯದಲ್ಲಿ ಎನ್.ಎಸ್.ರಾಜೇಶ್ ಅವರ ಶಾಮಿಯಾನ ಅಂಗಡಿಯಲ್ಲಿ ಟಿಕೆಟ್ ಲಭಿಸಲಿದೆ ಎಂದು ಮಾಹಿತಿ ನೀಡಿದರು.
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್, ಗೌರವಾಧ್ಯಕ್ಷ ಎಸ್.ಪಿ.ಲೋಕನಾಥ್, ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಕಾರ್ಯದರ್ಶಿ ಗುರುದತ್ ನಾಯಕ್, ಸಂಯೋಜಕ ರಾಜೇಶ್ ಎನ್.ಎಸ್, ಉಪಾಧ್ಯಕ್ಷ ಶಾಫಿ ಪ್ರಗತಿ,ಖಜಾಂಜಿ ಜಿ.ಎ.ಮಹಮ್ಮದ್, ಸಂಘಟನಾ ಸಮಿತಿಯ ಕೆ. ಗೋಕುಲ್ ದಾಸ್, ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಜತೆ ಖಜಾಂಜಿ ಅಬ್ದುಲ್ ರಜಾಕ್, ಪದಾಧಿಕಾರಿಗಳಾದ ಜಯಂತ್ ಮಂಡೆಕೋಲು, ಅಬ್ದುಲ್ ಮಜೀದ್ ಜನತಾ, ವಿನೋದ್ ಕಲ್ಲಪಳ್ಳಿ, ವೆಂಕಟ್ರಮಣ ಅರಂತೋಡು, ಅಬ್ದುಲ್ಲ ನಾವೂರು, ಸುನಿಲ್ ಎನ್.ಎಸ್. ಮಧುಸೂಧನ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು









