ಸುಳ್ಯ:ಕಬಡ್ಡಿ ಅಂಕಣದಲ್ಲಿ ಕಬಡ್ಡಿ ಆಟಗಾರರು ಮುನ್ನುಗ್ಗುವ ಅದೇ ವೇಗದಲ್ಲಿ, ಅದೇ ಆವೇಶದಲ್ಲಿ ತಮ್ಮ ವೀಕ್ಷಕ ವಿವರಣೆಯ ಮೂಲಕ ಕಬಡ್ಡಿ ಆಟದ ರಸಾಸ್ವಾದನೆಯನ್ನು ನೆರೆದ ಪ್ರೇಕ್ಷಕರ ಮನದಾಳಕ್ಕೆ ಮುಟ್ಟಿಸಿದ ವೀಕ್ಷಕ ವಿವರಣೆ ಐವರ್ನಾಡಿನಲ್ಲಿ ನಡೆದ ಅಂತಾರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಶೇಷ ಗಮನ ಸೆಳೆಯಿತು.ವಿವಿಧ ಭಾಷೆ, ವೈವಿಧ್ಯಮಯ ಶೈಲಿಯ ಮೂಲಕ ಕ್ರೀಡೆಯ ಆಳಕ್ಕೆ ಇಳಿದು ಪ್ರತಿ ಪಂದ್ಯವನ್ನು ವರ್ಣಿಸುವ ಇವರ ‘ಕಮೆಂಟ್ರಿಯ ಜುಗಲ್ಬಂದಿ’ ಪಂದ್ಯಾಟದ
ಹೈಲೈಟ್ಸ್ಗಳಲ್ಲೊಂದು. ಕನ್ನಡ, ತುಳು, ಹಿಂದಿ, ಇಂಗ್ಲೀಷ್ ಹೀಗೆ ವಿವಿಧ ಭಾಷೆಗಳ ಮೂಲಕ ವೀಕ್ಷಕ ವಿವರಣೆ ನೀಡಿದ ಗುರುರಾಜ್ ಸಿರಸಿ ಹಾಗು ಪ್ರಸಾದ್ ಕಾಟೂರು ತಮ್ಮ ಕಂಚಿನ ಕಂಠದ ಕಮೆಂಟ್ರಿ ಮೂಲಕ ಪ್ರೇಕ್ಷಕರಿಗೆ ಎರಡು ದಿನಗಳ ಕಾಲ ಕಬಡ್ಡಿಯ ರಸದೌತಣ ಉಣ ಬಡಿಸಿದರು.
ಕಳೆದ ಹಲವು ವರ್ಷಗಳಿಂದ ಕ್ರೀಡಾ ವೀಕ್ಷಕ ವಿವರಣೆಯ ಮೂಲಕ ಪ್ರಸಿದ್ಧರಾದವರು ಗುರುರಾಜ್. ಕನ್ನಡ, ಇಂಗ್ಲೀಷ್, ಹಿಂದಿ, ಭಾಷೆಗಳಲ್ಲಿ ನಿರ್ಗಳವಾಗಿ ಗಂಟೆ ಗಟ್ಟಲೆ ಇವರು ವೀಕ್ಷಕ ವಿವರಣೆ ನೀಡುತ್ತಾರೆ. ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಸೇರಿದಂತೆ ಹಲವಾರು ಕ್ರೀಡಾಕೂಟಗಳ

ಗುರುರಾಜ್
ವೀಕ್ಷಕ ವಿವರಣೆ ನೀಡಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತಮಿಳುನಾಡು, ಮುಂಬೈ ಸೇರಿ ವಿವಿಧ ರಾಜ್ಯಗಳಲ್ಲಿ ನೂರಾರು ಪಂದ್ಯಾಕೂಟಗಳ ವೀಕ್ಷಕ ವಿವರಣೆ ನೀಡಿದ್ದಾರೆ. ಹಲವು ರಾಷ್ಟ್ರೀಯ ಪಂದ್ಯಕೂಟಗಳ ವೀಕ್ಷಕ ವಿವರಣೆ ನೀಡಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐವರ್ನಾಡಿನಲ್ಲಿ ಪ್ರಥಮ ಬಾರಿಗೆ ವೀಕ್ಷಕ ವಿವರಣೆ ನೀಡಿದ್ದಾರೆ.
ಪ್ರಸಾದ್ ಕಾಟೂರು ಸ್ಥಳೀಯ ಹಲವಾರು ಕ್ರೀಡಾಕೂಟಗಳ ವೀಕ್ಷಕ ವಿವರಣೆ ನೀಡುವ ಚಿರಪರಿಚಿತ ಶಬ್ದ. ತನ್ನ ಗಂಭೀರ ಸ್ವರದ ಮೂಲಕ ಕನ್ನಡ ಮತ್ತು ತುಳುವಿನಲ್ಲಿ ಲೀಲಾಜಾಲವಾಗಿ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನೀಡುತ್ತಿರುವವರು ಪ್ರಸಾದ್. ಸುಳ್ಯ ಬೊಳುಬೈಲಿನ ಕಾಟೂರು ನಿವಾಸಿ ಶಶಿ ಪ್ರಸಾದ್ 2017ರಿಂದ ವಿವಿಧ ಪಂದ್ಯಾಕೂಟಗಳ ವೀಕ್ಷಕ ವಿವರಣೆ ನೀಡುವ ಮೂಲಕ

ಜನಪ್ರಿಯರಾಗಿದ್ದಾರೆ. ಕಬಡ್ಡಿ ಕಮೆಂಟ್ರಿಯಲ್ಲಿ ಸ್ಪೆಷಲಿಸ್ಟ್ ಆಗಿರುವ ಪ್ರಸಾದ್ ಹಗ್ಗಜಗ್ಗಾಟ, ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕಮೆಂಟ್ರಿ ಹೇಳುತ್ತಾರೆ. ತನ್ನ ಸ್ವರದ ಏರಿಳಿತಗಳ ಮೂಲಕ ಅಂಕಣದಲ್ಲಿನ ಕಬಡ್ಡಿಯ ಆವೇಶವನ್ನು ಅದೇ ಅಬ್ಬರ, ಆವೇಶದೊಂದಿಗೆ ಪ್ರೇಕ್ಷರಿಗೆ ಮುಟ್ಟಿಸುವುದು ಇವರ ವಿಶೇಷತೆ. ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ವೀಕ್ಷಕ ವಿವರಣೆ ನೀಡಿದ್ದಾರೆ. ಒಟ್ಟಿನಲ್ಲಿ ಐವರ್ನಾಡಿನಲ್ಲಿ ನಡೆದ ಕಬಡ್ಡಿಯ ರಂಗನ್ನು ಮನ ಮೋಹಕವಾಗಿ ನೆರೆದ ಪ್ರೇಕ್ಷಕರಿಗೆ ಮುಟ್ಟಿಸಿದ ಈ ಇಬ್ಬರು ವೀಕ್ಷಕ ವಿವರಣೆಗಾರರು ಐವರ್ನಾಡಿನ ಕಬಡ್ಡಿ ಮನಸ್ಸಿನಲ್ಲಿ ಅಚ್ಚೊತ್ತಿರುವಂತೆ ಇವರ ಕಮೆಂಟ್ರಿಯ ಅಲೆ ಕಿವಿಗಳಲ್ಲಿ ಬಹುಕಾಲ ಉಳಿಯಬಹುದು.