ಸುಳ್ಯ:ಶಿಕ್ಷಣ ವ್ಯವಸ್ಥೆ ಸದೃಢವಾಗಿದ್ದರೆ ಸಂಸ್ಕಾರ, ಸಂಸ್ಕೃತಿಯಿಂದ ಕೂಡಿದ ಭವ್ಯ ದೇಶ ನಿರ್ಮಾಣ ಮಾಡಲು ಸಾಧ್ಯ ಎಂದು ಶ್ರೀ ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ ಸುಳ್ಯ ಇದರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಸುಳ್ಯದ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಗೆ ಎಂ.ಆರ್.ಪಿ.ಎಲ್. ಮಂಗಳೂರು ಇವರು ಕೊಡುಗೆಯಾಗಿ ನೀಡಿದ ವಿಸ್ತೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ

ಅವರು ಆಶೀರ್ವಚನ ನೀಡಿದರು.ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಈ ದೇಶ ಸುಸಂಸ್ಕೃತವಾಗಿ ಬೆಳಗಲು ಸಾಧ್ಯ. ವಿದ್ಯಾರ್ಥಿಗಳು ನಿರಂತರ ಕಲಿಕೆ, ಶೋಧನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಹೇಳಿದರು.
ನೂತನ ವಿಸ್ತ್ರತ ಕಟ್ಟಡದ ಉದ್ಘಾಟನೆ ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಮಾತನಾಡಿ ವಿದ್ಯೆಯು ವ್ಯಕ್ತಿಯನ್ನು ಸಮಾಜದ ಶಕ್ತಿಯಾಗಿಸುತ್ತದೆ ಎಂದು ಹೇಳಿದರು. ಭಾರತದ ಮಾನವ ಸಂಪನ್ಮೂಲ ಜಗತ್ತಿಗೆ ಮಾದರಿಯಾಗಿ ಬೆಳೆಯಲು ವಿದ್ಯಾ ಕ್ಷೇತ್ರ ದೊಡ್ಡ ಕೊಡುಗೆ ನೀಡಿದೆ. ಮಾನವ ಸಂಪನ್ಮೂಲದ ಕೊಡುಗೆಯಿಂದ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ

ಶಕ್ತಿಯಾಗಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಸಲ್ಲದು ಎಂದ ಅವರು ವಿಶ್ವ ವಿದ್ಯಾನಿಲಯಗಳು ಸಂಶೋಧನೆಗೆ ಒತ್ತು ನೀಡಬೇಕು ಎಂದು ಹೇಳಿದರು. ಸರ್ವಶಿಕ್ಷಾ ಅಭಿಯಾನ ಈ ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸವಾಲಿನ ಯುಗದಲ್ಲಿ ಸವಾಲನ್ನು ಎದುರಿಸಲು ಹೊಸ ದಿಕ್ಕನ್ನು ಕಂಡುಕೊಳ್ಳಬೇಕು. ಈ ಸವಾಲನ್ನು ಎದುರಿಸಲು ಶಾರದಾ ಪ್ರೌಢಶಾಲೆಗೆ ಎಂಆರ್ಪಿಎಲ್ ದೊಡ್ಡ ಶಕ್ತಿ ನೀಡಿದೆ ಎಂದು ಡಿವಿಎಸ್ ಶ್ಲಾಘಿಸಿದರು.

ನಗರದ ಅಮೃತ ಭವನದಲ್ಲಿ ನಡೆದ ಸಮಾರಂಭವನ್ನು ಎಂ.ಆರ್.ಪಿ.ಎಲ್ ಮಂಗಳೂರು ಇದರ ಜನರಲ್ ಮೆನೇಜರ್ (ಆಡಳಿತ) ಸತೀಶ್ ಆಲೆಟ್ಟಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಧನಂಜಯ ಅಡಂಗಾಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತಾ ಭಾಗವಹಿಸಿದ್ದರು.

ದ.ಕ.ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ರೇವತಿ ನಂದನ್, ಕೋಶಾಧಿಕಾರಿ ಮಾಧವ ಗೌಡ, ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ದಯಾಮಣಿ, ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಭಾರತಿ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ.ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಭಾರತಿ ಪಿ ವಂದಿಸಿದರು. ಉಪನ್ಯಾಸಕರಾದ ಸ್ವರ್ಣ ಕಲಾ ಹಾಗೂ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ಎಂ.ಪಿ.ಉಮೇಶ್ ಮತ್ತಿತರರು ಸಹಕರಿಸಿದರು. ಸಮಾರಂಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡಿದವರನ್ನು, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರನ್ನು, ಶಿಕ್ಷಕರನ್ನು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

