ಧರ್ಮಸ್ಥಳ:ನೈತಿಕ ಶಿಕ್ಷಣ ಪ್ರಸ್ತುತ ಸಮಾಜಕ್ಕೆ ತುರ್ತು ಅನಿವಾರ್ಯವಾಗಿದ್ದು ಪುಸ್ತಕಗಳು ಸಾರ್ಥಕ ಬದುಕಿಗೆ ದಾರಿದೀಪವಾಗಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು.ಅವರು ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಕಟಿಸಿದ ‘ಜ್ಞಾನಪಥ’ ಮತ್ತು ‘ಜ್ಞಾನರಥ’ ಕೃತಿಗಳನ್ನು
ಲೋಕಾರ್ಪಣೆಗೊಳಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿದ್ಯಾರ್ಥಿಗಳು ದೇಶದ ಮುಂದಿನ ಜನಾಂಗವಾಗಿದ್ದು ಅವರ ಉಜ್ವಲ ಭವಿಷ್ಯ ರೂಪಿಸಲಿಕ್ಕಾಗಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಓದಿದ ಪುಸ್ತಕದ ಅನುಭವವನ್ನು ಬದುಕಿನಲ್ಲಿ ಅಳವಡಿಸಿದಾಗ ಜೀವನ ಪಾವನವಾಗುತ್ತದೆ.

ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು ಸಮಾಜದ ಅಮೂಲ್ಯ ಆಸ್ತಿಯಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.ಚಲನಚಿತ್ರ ನಟ ದತ್ತಣ್ಣ (ದತ್ತಾತ್ರೇಯ ಎಚ್.ಡಿ.) ಶುಭಾಶಂಸನೆ ಮಾಡಿದರು. ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ನೀಡಲಾಯಿತು.ಶಾರದಾಮಣಿಶೇಖರ್ ನೇತೃತ್ವದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಸುಶ್ರಾವ್ಯ ಗಾಯನ ಮತ್ತು ನೃತ್ಯ ಪ್ರದರ್ಶನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.
ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಧನ್ಯವಾದವಿತ್ತರು.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಶಶಿಕಾಂತ ಜೈನ್ ಸ್ವಾಗತಿಸಿದರು. ಪುದುವೆಟ್ಟು ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.





