ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕರ್ನಾಟಕ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ 2025ರ ಬಗ್ಗೆ ಜಿಲ್ಲಾ ಮಟ್ಟದ ಮಾಹಿತಿ ಕಾರ್ಯಗಾರದ ಸಭೆಯು ಪುತ್ತೂರಿನ ಒಕ್ಕಲಿಗ ಸಭಾಭವನದ ಚುಂಚಶ್ರೀಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ. ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾ ಅಧ್ಯಕ್ಷತೆಯನ್ನು
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ವಹಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪಟ್ಟಡ ಶಿವಕುಮಾರ್ ವಿಷಯ ತಜ್ಞರು ಮ್ಯಸೂರು ಇವರು ಭಾಗವಹಿಸಿ, ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರೂ ಸರಿಯಾದ ರೀತಿಯಲ್ಲಿ ಅಂಕಿ ಅಂಶಗಳನ್ನು ದಾಖಲಿಸಬೇಕು ನಮ್ಮ ಜನಾಂಗದವರ ಸಾಮಾಜಿಕ ಸ್ಥಿತಿ ಗತಿ ಶೈಕ್ಷಣಿಕ ಮಟ್ಟ ಮತ್ತು ಆರ್ಥಿಕ ಬೆಳವಣಿಗೆಯ ಬಗ್ಗೆ ಪ್ರಾಮಾಣಿಕವಾಗಿ ಮುಚ್ಚುಮರೆಯಲ್ಲದೆ ದಾಖಲಿಸಬೇಕು.ಇದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಭೆಯಲ್ಲಿ ಜಗದ್ಗುರು ಶ್ರೀ ನಿರ್ಮಾಲಾನಂದ ಸ್ವಾಮೀಜಿಗಳ ವಿಶೇಷ ಪ್ರತಿನಿಧಿಗಳಾಗಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಎಮ್.ನಾಗರಾಜು, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿಯವರು ಉಪಸ್ಥಿತರಿದ್ದು ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಒಂದು ಅವಕಾಶ ಸಿಕ್ಕಿದೆ. ನಮ್ಮೆಲ್ಲರ ಹೋರಾಟದ ಫಲವಾಗಿ ಈ ಸಮೀಕ್ಷೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದನ್ನು ನಾವೆಲ್ಲಾ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಒಕ್ಕಲಿಗ ಗೌಡ ಸಂಘ ಮಂಗಳೂರು ಇದರ ಮಾತೃ ಸಂಘದ ಅಧ್ಯಕ್ಷ ಲೋಕಯ್ಯಗೌಡ ಮಾತನಾಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಲಂನಲ್ಲಿ ಸೂಚಿಸಿರುವಂತೆ ಮೊದಲಿಗೆ ಜಾತಿ ಎಂಬುದರಲ್ಲಿ ಒಕ್ಕಲಿಗ ಎಂದು ಬರೆದು ಉಪಜಾತಿ ಸೂಚನೆಯಲ್ಲಿ ಗೌಡ ಎಂಬುದಾಗಿಯೂ, ಭಾಷೆ ಕಲಂನಲ್ಲಿ ಆಯಾ ಪ್ರಾದೇಶಿಕ ಭಾಷೆಗಳಾದ ಅರೆಭಾಷೆ, ತುಳು, ಕನ್ನಡ ಹೀಗೆ ಬರೆಯುವಂತೆ ಸೂಚಿಸಿದಲ್ಲದೆ ಪ್ರತಿಯೊಬ್ಬರೂ ಇದನ್ನು ಅನುಸರಿಸಬೇಕು ಎಂಬುದಾಗಿ ಅಭಿಪ್ರಾಯ ತಿಳಿಸಿದರು. ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠಂದೂರು, ಸರಕಾರದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ನಿವೃತ್ತ ಪೊಲೀಸ್ ಅಧೀಕ್ಷರಾದ ರಾಮದಾಸ್ ಪುತ್ತೂರು ಎಂ.ಬಿ.ಸದಾಶಿವ ಸುಳ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಈ ತೀರ್ಮಾನಕ್ಕೆ ಸಭೆಯಲ್ಲಿ ಬೆಂಬಲ ಸೂಚಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಜಿಲ್ಲೆಯ ಎಲ್ಲಾ ತಾಲೂಕುಗಳ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚಂದ್ರಶೇಖರ ಪೇರಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟಡ ಶಿವಕುಮಾರ್, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎಂ. ನಾಗರಾಜ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಯವರನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಯವರು ಶಾಲು ಹೊದಿಸಿ ಸನ್ಮಾನಿಸಿದರು.












