ಸುಳ್ಯ:ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿರುವ ಹಳೆಗೇಟು- ಜಯನಗರ ರಸ್ತೆ ಅಭಿವೃದ್ಧಿ ಕಾಮಗಾರಿ ಒಂದು ವಾರದಲದಲಿ ಅಭಿವೃದ್ಧಿ ಪಡಿಸದೇ ಇದ್ದರೆ ನಗರ ಪಂಚಾಯತ್ ಮುಂಭಾಗದಲ್ಲಿ ಸಾರ್ವಜನಿಕರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಯನಗರ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ವೇದಿಕೆಯ
ಪದಾಧಿಕಾರಿ ಪತ್ರಕರ್ತ ಹಸೈನಾರ್ ಜಯನಗರ ಮಾತನಾಡಿ ಜಯನಗರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ನೂರಾರು ವಿದ್ಯಾರ್ಥಿಗಳು ಸೇರಿ ಸಾವಿರಾರು ಮಂದಿ ಪ್ರತಿದಿನ ಪ್ರಯಾಣಿಸುವ ಈ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ಕೂಡಿದ್ದು ಸಂಚಾರವೇ ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ.ಇದನ್ನು ಸರಿಪಡಿಸಬೇಕೆಂದು ಹಲವು ಬಾರಿ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸಿದರೂ ರಸ್ತೆ ಅಭಿವೃದ್ಧಿಪಡಿಸಿಲ್ಲ.ರಸ್ತೆ ಅಭಿವೃದ್ಧಿಗೆಂದು 15 ಲಕ್ಷ ಅನುದಾನ ಮೀಸಲಿರಿಸಿ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ಎರಡು ತಿಂಗಳಾದರೂ ಕಾಮಗಾರಿ ಆರಂಭಿಸಿಲ್ಲ. ಒಂದು ವಾರದಲ್ಲಿ ರಸ್ತೆ ಕಾಮಗಾರಿ ನಡೆಸದಿದ್ದರೆ, ರಸ್ತೆಯ ಗುಂಡಿ ಮುಚ್ಚದಿದ್ದರೆ ನ.ಪಂ.ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ನಾಗರಿಕ ಹಿತರಕ್ಷಣಾ ಸಮಿತಿಯ ಕಸ್ತೂರಿ ಶಂಕರ್ ಮಾತನಾಡಿ’ ಜನರು ಕೇವಲ ತೆರಿಗೆ ಕಟ್ಟಲು ಮಾತ್ರ ಇರುವವರು ಎಂಬ ಭಾವನೆಯೇ ಎಂದು ಪ್ರಶ್ನಿಸಿದರು. ಈ ರಸ್ತೆಯು ಹಲವಾರು ಹರ್ಷಗಳಿಂದ ಎಕ್ಕುಟ್ಟಿ ಹೋಗಿದ್ದರೂ ರಸ್ತೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಆಸಕ್ತಿ ವಹಿಸಿಲ್ಲ ಎಂದು ಹೇಳಿದರು.
ರಾಕೇಶ್ ಕುಂಠಿಕಾನ ಮಾತನಾಡಿ ಜಯನಗರ ರಸ್ತೆ ಪೂರ್ತಿಯಾಗಿ ಅಭಿವೃದ್ಧಿ ಕಾಣದೆ 25 ವರ್ಷಗಳಾಗಿದೆ. 2000ನೇ ಇಸವಿಯಲ್ಲಿ ಡಾಮರೀಕರಣ ಆಗಿತ್ತು.ಬಳಿಕ ಸರಿಯಾಗಿ ಅನುದಾನ ಬಂದಿಲ್ಲ.2008ರಲ್ಲಿ 5 ಕೋಟಿ ವಿಶೇಷ ಅನುದಾನ ಬಂದಿದ್ದ ಸಂದರ್ಭದಲ್ಲಿ ನಗರದ ಕೆಲವು ರಸ್ತೆಗಳು ಅಭಿವೃದ್ಧಿ ಆಗಿದ್ದವು. ಇದೀಗ ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಇದರಿಂದ ನಗರದ ರಸ್ತೆಗಳು ಎಕ್ಕುಟ್ಟಿ ಹೋಗಿದೆ. ಅನುದಾನ ಬಿಡುಗಡೆ ಆದ ರಸ್ತೆಗಳ ಕಾಮಗಾರಿಗಳು ಕೂಡ ನಡೆಯುತ್ತಿಲ್ಲ ಎಂದು ಹೇಳಿದರು. ಜಯನಗರ ರಸ್ತೆ ಅಭಿವೃದ್ಧಿ ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಉಸ್ಮಾನ್ ಜಯನಗರ, ದಯಾನಂದ ಕುದ್ಪಾಜೆ, ಮುದ್ದಪ್ಪ ನಾರಾಜೆ, ಸಚಿನ್ ಕೊಯಿಂಗೋಡಿ, ಮಾಧವ ಜಯನಗರ, ಸುಂದರ ಕುದ್ಪಾಜೆ, ಯತಿನ್ ರಾವ್ ಹಳೆಗೇಟು, ಗೋಪಾಲ ನಾರಾಜೆ, ಧನಂಜಯ ಜಯನಗರ ಉಪಸ್ಥಿತರಿದ್ದರು.













