*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಹೈನುಗಾರಿಕೆ, ಹಸು ಸಾಕಣೆ, ಕೋಳಿ ಸಾಕಣೆ ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದರೂ ಆಡು ಸಾಕಣೆ ಸ್ವಲ್ಪ ಅಪರೂಪ ಎಂದೇ ಹೇಳಬಹುದು. ಹವ್ಯಾಸಕ್ಕಾಗಿ ಒಂದೆರಡು ಆಡುಗಳನ್ನು ಸಾಕುವುದು ಇದೆ.ವೃತ್ತಿಪರವಾಗಿ ಆಡು ಸಾಕಣೆ ಇಲ್ಲಿ ಬಲು ಅಪರೂಪ.ಇದ್ದರೂ ಇಲ್ಲಿ ಸ್ಥಳೀಯ ತಳಿಗಳೇ ಹೆಚ್ಚು ಸಾಕುತ್ತಾರೆ. ಆದರೆ ಅತ್ಯಂತ ಎತ್ತರದ ಮತ್ತು ಗಾಂಭೀರ್ಯ ಹೊಂದಿರುವ ‘ಜಮ್ನಾ ಪ್ಯಾರಿ’ ಎಂಬ ವಿಶಿಷ್ಠ ತಳಿಯ ಆಡುಗಳನ್ನು ಸಾಕುವವರು ಸುಳ್ಯ ತಾಲೂಕಿನ ಪೆರುವಾಜೆಯ ವನಶ್ರೀ ಗಣಪಯ್ಯ ಭಟ್ ಅವರ ಕುಟುಂಬ. ಒಂದೆರಡಲ್ಲಾ
19 ಜಮ್ನಾ ಪ್ಯಾರಿ ಆಡುಗಳನ್ನು ಇಲ್ಲಿ ಸಾಕಲಾಗುತ್ತದೆ. ಇವರ ಮನೆಯ ಪರಿಸರ ತುಂಬಾ ‘ಜಮ್ನಾ ಪ್ಯಾರಿ’ ಆಡುಗಳದ್ದೇ ಕಲರವ.ಇವು ಸ್ಥಳೀಯವಾಗಿ ಕಂಡು ಬರುವ ಸ್ಥಳೀಯ ತಳಿಗಳಂತೆ ಕುಬ್ಜ ತಳಿಗಳಲ್ಲ. ಎತ್ತರವಾಗಿ, ದಷ್ಟ ಪುಷ್ಟವಾಗಿ ಬೆಳೆಯುವ ಆಡುಗಳು. ಕೆಲವು ವರ್ಷಗಳ ಹಿಂದೆ ‘ಜಮ್ನಾ ಪ್ಯಾರಿ’ ಆಡಿನ ಹೆಸರಿನಲ್ಲಿ ಮಲಯಾಳಂನಲ್ಲಿ ಒಂದು ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾ ನೋಡಿದವರ ಮನಸ್ಸಿಗೆ ಜಮ್ನಾ ಪ್ಯಾರಿ ಆಡುಗಳು ಓಡೋಡಿ ಬರಬಹುದು. ಕುಂಜಾಕೋ ಬೋಬನ್-ಗಾಯತ್ರಿ ತಾರಾ ಜೋಡಿ ಅಭಿನಯದ
ಸಿನಿಮಾದಲ್ಲಿ ಹೀರೋ ಮತ್ತು ಹಿರೋಹಿನ್ ಜೀವನದಲ್ಲಿ ಜಮ್ನಾ ಪ್ಯಾರಿ ಆಡುಗಳು ಸೃಷ್ಠಿಸುವ ಹಲವು ಘಟನಾವಳಿಗಳನ್ನು ಅತ್ಯಂತ
ಸ್ವಾರಸ್ಯಕರವಾಗಿ ಚಿತ್ರಿಸಲಾಗಿತ್ತು.ಗಣಪಯ್ಯ ಭಟ್ಟರ ಮನೆಯಲ್ಲಿ ಆಳೆತ್ತರದ ಒಂದು ಗಂಡು ಆಡು,16 ಹೆಣ್ಣು ಆಡುಗಳು, ಮರಿಗಳು ಸೇರಿ ಒಟ್ಟು 19 ಜಮ್ನಾ ಪ್ಯಾರಿ ಆಡುಗಳು ಇವೆ.ಆಡು ಸಾಕಣೆ ಎಂದರೆ ಗಣಪಯ್ಯ ಭಟ್ಟರಿಗೆ ಅಚ್ಚು ಮೆಚ್ಚು. ಅದು ವಾಣೀಜ್ಯ ದೃಷ್ಠಿಯಿಂದ ಎಂಬುದಕ್ಕಿಂತಲೂ ಪ್ರೀತಿಯಿಂದ ಆಡು ಸಾಕುವುದು ಇವರ ಹವ್ಯಾಸ. ಕಳೆದ ಮೂರೂವರೆ ದಶಕಗಳಿಂದಲೂ ಹೆಚ್ಚು ಸಮಯದಿಂದ ಇವರ ಮನೆಯಲ್ಲಿ ಆಡುಗಳ ಕಲರವ ಇದೆ.1987 ರಿಂದ ನಿರಂತರ ಆಡು ಸಾಕುತ್ತಾರೆ.1998 ರಿಂದ ಜಮ್ನಾ ಪ್ಯಾರಿ ತಳಿಯ ಆಡುಗಳು ಇವರ ಮನೆಗೆ ಬಂದವು.1998ರಲ್ಲಿ ಬೆಂಗಳೂರಿನಿಂದ ಮೊದಲ ಬಾರಿಗೆ ಜಮ್ನಾ ಪ್ಯಾರಿ ಆಡನ್ನು ತಂದರು. ಆ ಬಳಿಕ ಅವರು ಇದೇ ತಳಿಯ ಆಡನ್ನೇ ಸಾಕುತ್ತಾರೆ. ಅದಕ್ಕಿಂತ ಮೊದಲು
ಮಲಬಾರ್, ಸ್ಥಳೀಯ ತಳಿಗಳನ್ನು ಸಾಕಿದ್ದರು.ಜಮ್ನಾ ಪ್ಯಾರಿ ಬಂದ ಮೇಲೆ ಪೂರ್ತಿಯಾಗಿ ಈ ತಳಿಯೇ ಇವರಲ್ಲಿದೆ. ಬೇರೆ ಬೇರೆ ತಳಿಗಳು ಸಾಕಿದರೆ ಮಿಶ್ರ ತಳಿಗಳು ಆಗುವ ಸಾಧ್ಯತೆ ಇದೆ. ಇದು ಒಳ್ಳೆಯದಲ್ಲ. ಆದುದರಿಂದ ಒಂದೇ ತಳಿಯ ಆಡು ಸಾಕುತ್ತೇವೆ ಎನ್ನುತ್ತಾರೆ ಗಣಪಯ್ಯ ಭಟ್.
ದೊಡ್ಡದಾಗಿ ಬೆಳೆಯುವ, ದೊಡ್ಡದಾದ ಅಗಲವಾದ ಕಿವಿಯ ಜಮ್ನಾ ಪ್ಯಾರಿ ಆಡುಗಳ ಹಾಲು, ಹಾಲಿನ ತುಪ್ಪಕ್ಕೆ ಬಲು ಬೇಡಿಕೆ ಇದೆ. ರುಚಿಕರ ಮತ್ತು ಅತ್ಯಂತ ಔಷಧಿಯುತವಾದ ಹಾಲು ಮತ್ತು ತುಪ್ಪ ಇದು. ಆದುದರಿಂದ ಔಷಧಿ ಮತ್ತಿತರ ಅಗತ್ಯಕ್ಕಾಗಿ ಹಾಲು, ತುಪ್ಪವನ್ನು ಅರಸಿ ಬರುವವರು ಸಾಕಷ್ಟು ಮಂದಿ ಇದ್ದಾರೆ. ಒಳ್ಳೆಯ ದರವೂ ಇದೆ ಎನ್ನುತ್ತಾರೆ ಗಣಪಯ್ಯ ಭಟ್. ಒಂದು ಹೊತ್ತು ಒಂದೂವರೆ ಲಿಟರ್ಗಿಂತಲೂ ಹೆಚ್ಚು ಹಾಲು ಕೊಡುತ್ತದೆ.ಕ್ವಿಂಟಲ್ಗಳಿಗಿಂತ ಹೆಚ್ಚು ತೂಕವೂ ಬರುತ್ತದೆ.
ಆಡುಗಳೆಂದರೆ ಗಣಪಯ್ಯ ಭಟ್ – ಶಶಿಕಲಾ ದಂಪತಿಗಳಿಗೆ ಬಲು ಪ್ರೀತಿ, ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಇವರ ಮನೆಯ ಸದಸ್ಯರಂತೆ ಸಾಕಿ ಸಲಹುತ್ತಾರೆ. ಅದಕ್ಕೆಂದೇ ವಿಶೇಷ ರೀತಿಯ ಗೂಡು ತಯಾರಿಸಿದ್ದಾರೆ.
“ಆಡುಗಳು ಎಂದರೆ ಅಚ್ಚು ಮೆಚ್ಚು.ಅದು ಒಂದು ಹವ್ಯಾಸ. ಕಳೆದ ಮೂರು ನಾಲ್ಕು ದಶಕಗಳಿಂದ ನಮ್ಮ ಮನೆಯಲ್ಲಿ ಅಡು ಸಾಕಣೆ ನಿರಂತರವಾಗಿ ಇದೆ. ಸುಮಾರು 24 ವರ್ಷದಿಂದ ಜಮ್ನಾ ಪ್ಯಾರಿ ಆಡುಗಳನ್ನೇ ಸಾಕುತ್ತಿದ್ದೇವೆ”
-ಗಣಪಯ್ಯ ಭಟ್
ವನಶ್ರೀ.