ಟೆಹ್ರಾನ್: ಇರಾನ್ನ ಅಧ್ಯಕ್ಷ ಇಬ್ರಾಹಿಂ ರೈಸಿ (63) ಅವರು ಪ್ರಯಾಣಿಸಿದ್ದ
ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು ದುರಂತದಲ್ಲಿ ಪ್ರಯಾಣಿಸಿದ್ದ ಇಬ್ರಾಹಿಂ ರೈಸಿ, ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಅಬ್ದೊಲ್ಲಾಹಿಯಾನ್ ಹಾಗೂ ಕೆಲ ಹಿರಿಯ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್
ಭಾನುವಾರ ಅಜೆರ್ ಬೈಜಾನ್ ಪ್ರಾಂತ್ಯದ ಗಡಿಯ ಗುಡ್ಡಪ್ರದೇಶಗಳ ವ್ಯಾಪ್ತಿಯಲ್ಲಿ ಅಪಘಾತ’ಕ್ಕೀಡಾಗಿತ್ತು. ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್ ನಿಯಂತ್ರಣ ಘಟಕದ ಸಂಪರ್ಕ ಕಡಿದುಕೊಂಡಿದ್ದು, ಅತ್ಯಂತ ವೇಗವಾಗಿ ಭೂಸ್ಪರ್ಶ ಮಾಡಿದೆ.ಹೆಲಿಕಾಪ್ಟರ್ ನಾಪತ್ತೆಯಾಗಿರುವ ಗುಡ್ಡ ಪ್ರದೇಶಗಳಲ್ಲಿ ದಟ್ಟನೆಯ ಮಂಜು ಮಸುಕಿದ್ದು, ಶೋಧ ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದವು.
ಅಜೆರ್ಬೈಜಾನ್ನಲ್ಲಿ ಅರಾಸ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟು ಉದ್ಘಾಟನೆಗಾಗಿ ರೈಸಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಮ್ ಅಲಿಯೆವ್ ಅವರು ಇದ್ದರು.ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನ ಜೊತೆಗೆ ಬೆಂಗಾವಲಿನ ಎರಡು ಹೆಲಿಕಾಪ್ಟರ್ಗಳು ಹಾರಾಟ ಆರಂಭಿಸಿದ್ದವು. ಅವು ಸುರಕ್ಷಿತವಾಗಿ ನಿಗದಿತ ತಾಣ ತಲುಪಿವೆ ಎಂದು ವರದಿ ತಿಳಿಸಿದೆ.