ನವದಹಲಿ: ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ 14 ರನ್ಗಳ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 9 ವಿಕೆಟ್ 204 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿಗೆ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ190 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ 13.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದ್ದ
ಡೆಲ್ಲಿ ಗೆಲುವಿನೆಡೆಗೆ ಸಾಗಿತ್ತು. ಆದರೆ ಬಳಿಕ ಡೆಲ್ಲಿ ಬ್ಯಾಟಿಂಗ್ ಕುಸಿಯಿತು. ಡೆಲ್ಲಿ ಪರ ಫ್ಯಾಫ್ ಡುಪ್ಲೆಸಿಸ್ (62), ನಾಯಕ ಅಕ್ಸರ್ ಪಟೇಲ್ (43) ಉತ್ತಮ ಹೋರಾಟ ನಡೆಸಿದರು. ಕೊನೆಯಲ್ಲಿ ವಿಪ್ರಾಜ್ ನಿಗಂ19 ಎಸೆತಗಳಲ್ಲಿ 38 ರನ್ ಗಳಿಸಿದರೂ ಗೆಲುವು ದಕ್ಕಲಿಲ್ಲ. ಕೆಕೆಆರ್ ಪರ ಸುನಿಲ್ ನರೈನ್ 3 ಹಾಗೂ ವರುಣ್ ಚಕ್ರವರ್ತಿ 2 ವಿಕೆಟ್ ಉರುಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಗೆ ಆರಂಭಿಕರಾದ ರೆಹಮಾನುಲ್ಲ ಗುರ್ಬಾಜ್(26) ಮತ್ತು ಸುನಿಲ್ ನರೈನ್(27) ಉತ್ತಮ ಆರಂಭ ನೀಡಿದರು. ಬಳಿಕ ಬಂದ ನಾಯಕ ಅಜಿಂಕ್ಯ ರಹಾನೆ(26) ಮತ್ತು ಆಂಗ್ಕ್ರಿಶ್ ರಘುವಂಶಿ(44) ಉಪಯುಕ್ತ ಕಾಣಿಕೆ ನೀಡಿದರು. ರಿಂಕು ಸಿಂಗ್ 36 ರನ್ ಸಿಡಿಸಿ ಅಬ್ಬರಿಸಿದರು.ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ ಆ್ಯಂಡ್ರೆ ರಸೆಲ್(17) ತಂಡದ ಮೊತ್ತ 200ರ ದಾಟಿ ದಾಟುವಲ್ಲಿ ನೆರವಾದರು.ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 3, ವಿಪ್ರಾಜ್ ನಿಗಮ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಉರುಳಿಸಿದರು.





