ಅಹಮದಾಬಾದ್: ಐಪಿಎಲ್ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು ಮೊದಲ ಬಾರಿಗೆ ಐಪಿಎಲ್ ಕಪ್ಗೆ ಮುತ್ತಿಕ್ಕಲು ಸಿದ್ಧತೆ ನಡೆಸಿದೆ. ನಾಲ್ಕನೇ ಬಾರಿ ಐಪಿಎಲ್ ಫೈನಲ್ ಆಡಲಿರುವ ಆರ್ಸಿಬಿ ಹದಿನೆಂಟು ವರ್ಷಗಳ ಕಪ್ ಬರವನ್ನು ನೀಗಿಸುವ ಭರವಸೆ ಮೂಡಿಸಿದೆ. ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ
ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳಲ್ಲಿ ಯಾರೇ ಗೆದ್ದರೂ ಮೊದಲ ಬಾರಿ ಚಾಂಪಿಯನ್ ಆಗುತ್ತಾರೆ. ಪಂಜಾಬ್ ತಂಡಕ್ಕೂ 18 ವರ್ಷಗಳಿಂದ ಪ್ರಶಸ್ತಿ ಕನಸು ನನಸಾಗಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಪ್ರಶಸ್ತಿ ಗೆದ್ದು ದಾಖಲೆ ಹಂಚಿಕೊಂಡಿವೆ. ಕೋಲ್ಕತ್ತ ನೈಟ್ ರೈಡರ್ಸ್ ಮೂರು ಸಲ ಚಾಂಪಿಯನ್ ಆಗಿದೆ. ಆರ್ಸಿಬಿಯು ಇದುವರೆಗೆ 9 ಸಲ ಪ್ಲೇ ಆಫ್ ಪ್ರವೇಶಿಸಿದೆ. ಅದರಲ್ಲಿ ಮೂರು ಬಾರಿ (2009,2011 ಮತ್ತು 2016) ರನ್ನರ್ಸ್ ಅಪ್ ಆಗಿದೆ. ಈ ಋತುವಿನಲ್ಲಿ ಆರ್ಸಿಬಿಯು ಅಮೋಘ ಪ್ರದರ್ಶನ ನೀಡಿದೆ.
ವಿರಾಟ್ ಒಟ್ಟು 614 ರನ್ ಗಳಿಸಿದ್ದಾರೆ. ಫಿಲ್ ಸಾಲ್ಟ್ (387 ರನ್) ಮತ್ತು ತಂಡಕ್ಕೆ ಈ ವರ್ಷವಷ್ಟೇ ನಾಯಕನಾಗಿ ನೇಮಕರಾದ ರಜತ್ ಪಾಟೀದಾರ್ (286), ‘ಫಿನಿಷರ್’ ಜಿತೇಶ್ ಶರ್ಮಾ (237), ಆಲ್ರೌಂಡರ್ ಕೃಣಾಲ್ ಪಾಂಡ್ಯ (105), ಟಿಮ್ ಡೇವಿಡ್ (187) ಮತ್ತು ರೊಮೆರಿಯೊ ಶೆಫರ್ಡ್ ಅವರೆಲ್ಲರೂ ತಂಡಕ್ಕೆ ಅಗತ್ಯವಿದಾಗ ಮಿಂಚಿದ್ದಾರೆ. ಗೆಲುವಿನ ರೂವಾರಿಗಳಾಗಿದ್ದಾರೆ.
ಬೌಲಿಂಗ್ನಲ್ಲಿಯೂ ತಂಡವು ಸಮತೋಲನದಿಂದ ಕೂಡಿದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ವುಡ್ (21 ವಿಕೆಟ್), ಯಶ್ ದಯಾಳ್ (12), ಭುವನೇಶ್ವರ್ ಕುಮಾರ್ (15), ಕೃಣಾಲ್ ಪಾಂಡ್ಯ (15) ಮತ್ತು ಸುಯಶ್ ಶರ್ಮಾ (8) ಕೂಡ ಉತ್ತಮ ಲಯದಲ್ಲಿದ್ದಾರೆ.
ಪಂಜಾಬ್ ತಂಡದ ನಾಯಕ ಶ್ರೇಯಸ್ ಅತ್ಯುತ್ತಮ ಫಾರ್ಮ್ನಲ್ಲಿದ್ದು ಎರಡನೇ ಕ್ವಾಲಿಫೈಯರ್ನಲ್ಲಿ ಮುಂಬೈ ವಿರುದ್ಧ ಅಜೇಯ 87 ರನ್ ಗಳಿಸಿ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಶ್ರೇಯಸ್ ಅಲ್ಲದೇ ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ನೆಹಲ್ ವಧೇರಾ, ಶಶಾಂಕ್ ಸಿಂಗ್ ಹಾಗೂ ಜೋಶ್ ಇಂಗ್ಲಿಸ್ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್, ಕೈಲ್ ಜೆಮಿಸನ್, ಕನ್ನಡಿಗ ವೈಶಾಖ ವಿಜಯಕುಮಾರ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಬೌಲಿಂಗ್ ವಿಭಾಗವನ್ನು ಶಕ್ತಿಯುತಗೊಳಿಸಿದ್ದಾರೆ. ಪಂದ್ಯ ಆರಂಭ ರಾತ್ರಿ 7.30ಕ್ಕೆ





