*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಸ್ವಾದಿಷ್ಟ ಆಹಾರ ನೀಡಬೇಕು ಎಂದು ಹಿಂದಿನ ಸಿದ್ದರಾಮಯ್ಯ ಸರಕಾರ ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಿತ್ತು. ಅದರಂತೆ ಸುಳ್ಯದಲ್ಲಿಯೂ ಕೆಲವು ವರ್ಷದ ಹಿಂದೆ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಿತ್ತು. ಸುಳ್ಯ ಮಿನಿವಿಧಾನ ಸೌಧದ ಬಳಿ ಇರುವ ಇಂದಿರಾ ಕ್ಯಾಂಟೀನ್ ಕಳೆದ ಹಲವು ವರ್ಷಗಳಿಂದ ಅನ್ನ ದಾಸೋಹ ಮಾಡುತಿದೆ.ಇದೀಗ ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತೆ
ಅಧಿಕಾರಕ್ಕೆ ಬಂದಿರುವ ಹಿನ್ನಲೆಯಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ ಇನ್ನಷ್ಟು ಕಾಯಕಲ್ಪ ನೀಡಿ ಕೆಲವೊಂದು ಬದಲಾವಣೆ ತಂದು ರುಚಿಯ ವೈವಿಧ್ಯತೆಯನ್ನು ಹೆಚ್ಚಿಸಿದೆ. ಹೊಸ ಆಹಾರದ ಮೆನು ಜಾರಿ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಇಂದಿರಾ ಕ್ಯಾಂಟೀನ್ನಲ್ಲಿ ಹೊಸ ಆಹಾರದ ಮೆನು ಜಾರಿಗೆ ಬಂದಿದೆ. ಅತೀ ಕಡಿಮೆ ದರದಲ್ಲಿ ಪ್ರತಿ ದಿನ ಹೊಟ್ಟೆ ತುಂಬಾ ಆಹಾರ ನೀಡುತ್ತಾರೆ. ರೂ.5 ಕ್ಕೆ ಬೆಳಿಗ್ಗೆ ಇಡ್ಲಿ ಸಾಂಬಾರ್ ನೀಡಲಾಗುತ್ತದೆ. ಮತ್ತೆ ಹೆಚ್ಚುವರಿ 5 ರೂ ನೀಡಿದರೆ ಪ್ರತಿ ದಿನ ವಿವಿಧ ತಿಂಡಿಗಳನ್ನು ಉಣ ಬಡಿಸಲಾಗುತ್ತದೆ.
ಆದಿತ್ಯವಾರ ಕೇಸರಿ ಬಾತ್, ಸೋಮವಾರ ನೀರು ದೋಸೆ, ಮಂಗಳವಾರ ಉಪ್ಪೀಟು, ಬುಧವಾರ ಪುಂಡಿ ಗಸಿ, ಗುರುವಾರ ಫಲವು, ಶುಕ್ರವಾರ ಟೊಮೆಟೊ ಬಾತ್, ಶನಿವಾರ ಬನ್ಸ್ ಇರುತ್ತದೆ. ಒಟ್ಟಿನಲ್ಲಿ 10 ರೂಗೆ ಇಡ್ಲಿ ಸಾಂಬಾರ್ ಮತ್ತು ಇತರ ತಿಂಡಿಗಳ ಸ್ವಾದಿಷ್ಟ ಮೆನು ಲಭ್ಯವಿದೆ.
ಮಧ್ಯಾಹ್ನ ರೂ.10ರೂಗೆ ಅನ್ನ, ಸಾಂಬಾರ್, ಪಲ್ಯ, ಉಪ್ಪಿನ ಕಾಯಿ ನೀಡುತ್ತಾರೆ. ಹೆಚ್ಚುವರಿ 10 ರೂ ನೀಡಿದರೆ ಚಪಾತಿ ಲಭ್ಯವಿದೆ. ಮಂಗಳವಾರ ಮತ್ತು ಶುಕ್ರವಾರ ಊಟದ ಜೊತೆ ಪಾಯಸ, ಭಾನುವಾರ ಮಜ್ಜಿಗೆ ನೀಡಲಾಗುತ್ತದೆ. ಸಂಜೆಗೆ ಮಧ್ಯಾಹ್ನದ ಮೆನುವೇ ಇರಲಿದೆ ಅಂದರೆ ಊಟ, ಚಪಾತಿ ಇರಲಿದೆ. 10 ರೂಗೆ ಊಟ ಹೆಚ್ಚುವರಿ 10 ರೂಗೆ ಚಪಾತಿ ಲಭ್ಯವಿರಲಿದೆ ಎಂದು ಇಂದಿರಾ ಕ್ಯಾಂಟೀನ್ನ ನಿರ್ವಾಹಕರಾದ ಪವನ್ ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ 7.30ರಿಂದ 9.30ರ ಗಂಟೆಯ ತನಕ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ 12.30ರಿಂದ 3 ಗಂಟೆಯ ತನಕ ಮಧ್ಯಾಹ್ನದ ಊಟ, ಸಂಜೆ 5ರಿಂದ 8ರ ತನಕ ಸಂಜೆಯ ಉಪಾಹಾರ ಲಭ್ಯವಿರಲಿದೆ.
ಇದೀಗ ಮೆನು ಬದಲಾಗಿ ರುಚಿಯ ವೈವಿಧ್ಯತೆ ಹೆಚ್ಚಿದ ಕಾರಣ ಇಂದಿರಾ ಕ್ಯಾಂಟೀನ್ಗೆ ಬರುವವರ ಸಂಖ್ಯೆಯೂ ಹೆಚ್ಚಿದೆ. ವೈವಿಧ್ಯಮಯ ಮೆನುವಿನಿಂದ ಇಂದಿರಾ ಕ್ಯಾಂಟೀನ್ಗೆ ಬರುವವರು ಖುಷಿ ಖುಷಿಯಾಗಿ ಆಹಾರ ಸೇವಿಸುತ್ತಾರೆ.
ಬೆಳಿಗ್ಗೆ, ಮಧ್ಯಾಹ್ನ 200 ಕ್ಕೂ ಹೆಚ್ಚು ಮಂದಿ ಆಹಾರ ಸೇವಿಸುತ್ತಾರೆ. ಸಂಜೆ 70-80 ಮಂದಿ ಆಹಾರ ಸೇವಿಸಲು ಬರುತ್ತಾರೆ ಎನ್ನುತ್ತಾರೆ ಪವನ್. ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಸೇರಿ ಪ್ರತಿದಿನ ಹಲವಾರು ಮಂದಿ ಸುಳ್ಯದ ಇಂದಿರಾ ಕ್ಯಾಂಟೀನ್ನಲ್ಲಿ ಊಟ, ತಿಂಡಿ ಸೇವಿಸಿ ರುಚಿಯ ವೈವಿಧ್ಯತೆ ಸವಿಯುತ್ತಾರೆ.
ನವೀಕರಣಗೊಳ್ಳುತಿದೆ ಇಂದಿರಾ ಕ್ಯಾಂಟೀನ್:
ಇಂದಿರಾ ಕ್ಯಾಂಟೀನ್ ಕಟ್ಟಡ ಇದೀಗ ನವೀಕರಣಗೊಳ್ಳುತಿದೆ.
ಇಂದಿರಾ ಕ್ಯಾಂಟೀನ್ ಮೇಲ್ಭಾಗದಲ್ಲಿ ಶೀಟ್ ಅಳವಡಿಸಲಾಗಿದೆ ಕ್ಯಾಂಟೀನ್ನ ಮುಂಭಾಗ, ಹಿಂಭಾಗ ಸೇರಿ ಸುತ್ತಲೂ ಶೀಟ್ ಅಳವಡಿಸಲಾಗುತಿದೆ. ಇದರಿಂದ ಹೆಚ್ಚುವರಿ ಸ್ಥಳ ಲಭ್ಯವಾಗಲಿದೆ. ಫ್ಯಾನ್, ಲೈಟ್ಗಳ ನವೀಕರಣ ನಡೆಯುತಿದೆ. ಒಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಹೊಸ ರುಚಿ ಮತ್ತು ವ್ಯವಸ್ಥೆಗಳೊಂದಿಗೆ ಮೆರುಗು ಹೆಚ್ಚಿಸಿಕೊಂಡಿದೆ.