ಜೋಹನಸ್ಬರ್ಗ್: ಭಾರತದ ವೇಗದ ಬೌಲರ್ಗಳಾದ ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಮಾರಕ ದಾಳಿಗೆ ತಡವರಿಸಿದ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ ಆರಂಭಗೊಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 27.3 ಓವರ್ಗಳಲ್ಲಿ 116 ರನ್ಗಳಿಗೆ ಆಲ್ ಔಟ್ ಆಯಿತು. ಭಾರತದ ಪರ
ಅರ್ಷದೀಪ್ ಸಿಂಗ್ 37 ರನ್ ನೀಡಿ 5 ವಿಕೆಟ್ ಪಡೆದರೆ ಆವೇಶ್ ಖಾನ್ 27 ರನ್ ನೀಡಿ 4 ವಿಕೆಟ್ ಉರುಳಿಸಿದರು. ಕುಲ್ದೀಪ್ ಯಾದವ್ ಒಂದು ವಿಕೆಟ್ ಉರುಳಿಸಿದರು. 33 ರನ್ ಗಳಿಸಿದ ಆಂಡ್ರೂ ಫೆಲುಕುವಾಯೋ ದಕ್ಷಿಣ ಆಫ್ರಿಕಾದ ಟಾಪ್ ಸ್ಕೋರರ್ ಆದರು.ಟೋನಿ ಡಿ ಜಾರ್ಜಿ 28 ರನ್ ಗಳಿಸಿದರು
ಅರ್ಷದೀಪ್ ಸಿಂಗ್ ಆರಂಭದಲ್ಲಿಯೇ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿದರು. ಶೂನ್ಯ ರನ್ ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ರೀಜಾ ಹೆಂಡ್ರಿಕ್ಸ್ ಯಾವುದೇ ರನ್ ಗಳಿಸದೆ ಅರ್ಶದೀಪ್ ಸಿಂಗ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ರಾಸ್ಸಿ ವ್ಯಾನ್ ಡೆರ್ ದುಸೆನ್ಗೂ ಅರ್ಷದೀಪ್ ಪೆವಿಲಿಯನ್ ಹಾದಿ ತೋರಿಸಿದರು. ಇಬ್ಬರೂ ಆಟಗಾರರು ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದರು.
ದಕ್ಷಿಣ ಆಫ್ರಿಕಾ 42 ರನ್ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. ಅರ್ಷದೀಪ್ ಸಿಂಗ್ ಟೋನಿ ಡಿ ಜಾರ್ಜಿ ವಿಕೆಟ್ ಪಡೆದರು. ಟೋನಿ ಡಿ ಜಾರ್ಜಿ 28 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ದಕ್ಷಿಣ ಆಫ್ರಿಕಾದ ನಾಲ್ಕನೇ ವಿಕೆಟ್ ಸಹ ಅರ್ಷದೀಪ್ ಸಿಂಗ್ ಪಾಲಾಯಿತು. ಹೆನ್ರಿಚ್ ಕ್ಲಾಸೆನ್ 6 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ 54 ರನ್ಗಳಿಗೆ ಐದನೇ ವಿಕೆಟ್ ಕಳೆದುಕೊಂಡಿತು. ನಾಯಕ ಏಡೆನ್ ಮಾರ್ಕ್ರಾಮ್ 12 ರನ್ ಗಳಿಸಿ ಅವೇಶ್ ಖಾನ್ಗೆ ಬಲಿಯಾದರು. ಬಳಿಕ ವಿಯಾನ್ ಮುಲ್ಡರ್ ಮೊದಲ ಎಸೆತದಲ್ಲಿಯೇ ಅವೇಶ್ ಖಾನ್ಗೆ ಬಲಿಯಾದರು. 2 ರನ್ ಗಳಿಸಿದ
ಡೇವಿಡ್ ಮಿಲ್ಲರ್ ಹಾಗೂ 4 ರನ್ ಬಾರಿಸಿದ ಕೇಶವ್ ಮಹಾರಾಜ್ಗೆ ಆವೇಶ್ ಖಾನ್ ಪೆವಿಲಿಯನ್ ಹಾದಿ ತೋರಿಸಿದರು. ಫೆಲುಕುವಾಯೋ ವಿಕೆಟ್ ಪಡೆದ ಅರ್ಷದೀಪ್ 5 ವಿಕೆಟ್ ಗೊಂಚಲು ಪಡೆದರು. ಬರ್ಗರ್ ಅವರನ್ನು ಕುಲ್ದೀಪ್ ಯಾದವ್ ಬೌಲ್ಡ್ ಮಾಡಿದರು.
ಭಾರತದ ತಂಡಕ್ಕೆ ಸಾಯಿ ಸುದರ್ಶನ ಪಾದಾರ್ಪಣೆ ಮಾಡಿದರು. ಸಂಜು ಸ್ಯಾಮ್ಸನ್ ತಂಡಕ್ಕೆ ಮರಳಿದರು.














