ದುಬೈ: ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ಎರಡು ಟೆಸ್ಟ್ಗಳ ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದೆ. ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಆಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ಕರುಣ್ ನಾಯರ್ ಅವರನ್ನು ಕೈಬಿಡಲಾಗಿದೆ. 15 ಸದಸ್ಯರ
ತಂಡವನ್ನು ಪ್ರಕಟಿಸಲಾಗಿದ್ದು ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ಗಳ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 2ರಂದು ಅಹಮದಾಬಾದಿನಲ್ಲಿ ಆರಂಭವಾಗಲಿದೆ.
ರಿಷಭ್ ಪಂತ್ ಅವರು ಬಲಪಾದದ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲದ ಕಾರಣ ರವೀಂದ್ರ ಜಡೇಜಾ ಅವರಿಗೆ ಉಪ ನಾಯಕ ಸ್ಥಾನ ವಹಿಸಲಾಗಿದೆ. ನಾಯರ್ ಜೊತೆಗೆ ಇಂಗ್ಲೆಂಡ್ ವಿರುದ್ಧದ ತಂಡದಲ್ಲಿದ್ದ ಬಂಗಾಳದ ಆರಂಭ ಆಟಗಾರ ಅಭಿಮನ್ಯು ಈಶ್ವರನ್ ಅವರಿಗೆ ಕೋಕ್ ನೀಡಲಾಗಿದೆ.25 ವರ್ಷ ವಯಸ್ಸಿನ ಎಡಗೈ ಬ್ಯಾಟರ್ ಪಡಿಕ್ಕಲ್ ದೇಶಿಯ ಟೂರ್ನಿಗಳಲ್ಲಿ ತೋರಿದ ಉತ್ತಮ ಆಟದಿಂದ ಸ್ಥಾನ ಪಡೆದಿದ್ದಾರೆ.ವೇಗದ ಬೌಲರ್ ಬೂಮ್ರಾ ಅವರಿಗೆ ಸಾಕಷ್ಟು ವಿಶ್ರಾಂತಿ ಸಿಕ್ಕಿದ್ದು, ಅವರು ಎರಡೂ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಹೇಳಿದರು.
ತಂಡ ಇಂತಿದೆ:
ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜ (ಉಪ ನಾಯಕ), ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಎನ್.ಜಗದೀಶನ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಕುಲದೀಪ್ ಯಾದವ್.





