ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ಗೆಲುವಿಗೆ 398 ರನ್ ಗಳ ಬೃಹತ್ ಗುರಿ ನೀಡಿದೆ. ವಿರಾಟ್ ಕೊಹ್ಲಿ ದಾಖಲೆಯ 50 ನೇ ಶತಕ ಹಾಗೂ ಶ್ರೇಯಸ್ ಐಯ್ಯರ್ ಅವರ ಸತತ ಎರಡನೇ ಶತಕ, ಶುಭಮನ್ ಗಿಲ್ ಸ್ಟೋಟಕ ಅರ್ಧಶತಕದ ನೆರವಿನಿಂದ ಸೆಮಿ ಫೈನಲ್ ನಲ್ಲಿ ಕಿವೀಸ್ ವಿರುದ್ಧ ಭಾರತ ಭರ್ಜರಿ ಆಟ ಪ್ರದರ್ಶಿಸಿದ ಭಾರತ 50 ಓವರ್ಗಳಲ್ಲಿ 4 ವಿಕಟ್ ನಷ್ಟಕ್ಕ 397 ರನ್ ಗಳಿಸಿದೆ. ಕಿವೀಸ್ ವಿರುದ್ಧ ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್

ಆಯ್ದುಕೊಂಡರು. ಬ್ಯಾಟಿಂಗ್ ಬಂದ ಭಾರತ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ನಾಯಕ ರೋಹಿತ್ ಶರ್ಮಾ 29 ಎಸೆತಗಳಳಲ್ಲಿ
4 ಬೌಂಡರಿ 4 ಸಿಕ್ಸರ್ ಸಹಿತ ಸ್ಟೋಟಕ 47 ರನ್ ಪೇರಿಸಿದರು. ಶುಭಮನ್ ಗಿಲ್ 66 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್ ಸಹಿತ 80 ರನ್ ಗಳಿಸಿದರು. ಗಾಯದ ಕಾರಣ ಸ್ವಯಂ ನಿವೃತ್ತಿ ಹೊಂದಿದ್ದ ಗಿಲ್ ಕೊನೆಗೆ ಮತ್ತೆ ಕ್ರೀಸಿಗೆ ಆಗಮಿಸಿ ಬ್ಯಾಟಿಂಗ್ ಮುಂದುವರಿಸಿದರು.ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಿದ್ದ ವಿರಾಟ್ ಕೊಹ್ಲಿ 113 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 117 ರನ್ ಬಾರಿಸಿ ಏಕದಿನ ಮಾದರಿಯಲ್ಲಿ ಗರಿಷ್ಠ ಶತಕ ದಾಖಲಿಸಿದ ಆಟಗಾರ ಎಂದೆನಿಸಿಕೊಂಡರು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್
ಸತತ ಎರಡನೇ ಪಂದ್ಯದಲ್ಲಿ ಅಮೋಘ ಶತಕ ದಾಖಲಿಸಿದರು. ಅಯ್ಯರ್ 70 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 105 ರನ್ ಗಳಿಸಿದರು. ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಕೆ.ಎಲ್.ರಾಹುಲ್ 20 ಎಸೆತಗಳಲ್ಲಿ 5 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಅಜೇಯ 39 ರನ್ ಬಾರಿಸಿದರು. ಈ ಪಂದ್ಯದಲ್ಲಿ
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳ ಅರ್ಧಶತಕ ಸಾಧಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (49 ಶತಕ) ಅವರ
ಹೆಸರಲ್ಲಿದ್ದ ದಾಖಲೆಯನ್ನು ಕಿಂಗ್ ಕೊಹ್ಲಿ ಮುರಿದಿದ್ದಾರೆ. ಇದೇ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಗಳಿಸದ್ದ ವಿರಾಟ್, ಸಚಿನ್ ಶತಕಗಳನ್ನು ಸರಿಗಟ್ಟಿದ್ದರು.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಚಿನ್ ತೆಂಡುಲ್ಕರ್ 452 ಪಂದ್ಯಗಳಲ್ಲಿ 49 ಶತಕದೊಂದಿಗೆ ಅತೀ ಹೆಚ್ಚು ಶತಕ ಬಾರಿಸಿದ ಕ್ರಿಕೆಟಿಗರಾಗಿದ್ದಾರೆ. ಪ್ರಸ್ತುತ ಈ ದಾಖಲೆ ಮುರಿದ ವಿರಾಟ್ ಕೊಹ್ಲಿ 291 ಪಂದ್ಯಗಳಲ್ಲಿ 50 ಏಕದಿನ ಶತಕ ಸಿಡಿಸಿ ವಿಶ್ವಕಪ್ 2023 ನಲ್ಲಿ ತಮ್ಮ ಮೂರನೇ ಶತಕ ದಾಖಲಿಸಿದರು.









