ಕೋಲ್ಕತ್ತ: ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟಿ20 ವಿಶ್ವಕಪ್ನ ಸೂಪರ್8ರ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿದ ಭಾರತ ಟಿ20 ವಿಶ್ವಕಪ್ನ ಸೆಮಿಫೈನಲ್ಗೆ ಪ್ರವೃಶಿಸಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್ಗಳಲ್ಲಿ
4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿತು. 196 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ 19.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ199 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆರಂಭಿಕನಾಗಿ ಕಣಕ್ಕಿಳಿದ ಸಂಜು ನೆಲಕಚ್ಚಿ ಆಡಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗೆಲುವಿನ ರುವಾರಿಯಾದರು.50 ಎಸೆತಗಳನ್ನು ಎದುರಿಸಿದ ಸಂಜು 12 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 97 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತದ ಪರ ತಿಲಕ್ ವರ್ಮ 27, ಸೂರ್ಯಕುಮಾರ್ ಯಾದವ್ 18, ಹಾರ್ದಿಕ್ ಪಾಂಡ್ಯ 17 ರನ್ ಬಾರಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡಕ್ಕೆ ನಾಯಕ ಶಾಯ್ ಹೋಪ್ ಹಾಗೂ ರೋಸ್ಟನ್ ಚೇಸ್ ಉತ್ತಮ ಆರಂಭ ನೀಡಿದರು. ಬಳಿಕ ಜಸ್ಪ್ರೀತ್ ಬುಮ್ರಾ ಅವರು ಒಂದೇ ಓವರ್ನಲ್ಲಿ ಹೆಟ್ಮೇಯರ್ ಹಾಗೂ ಚೇಸ್ ಅವರ ವಿಕೆಟ್ ಪಡೆಯುವ ಮೂಲಕ ವಿಂಡೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಆದರೆ, ನಂತರ ಬಂದ ಜೇಸನ್ ಹೋಲ್ಡರ್ ಹಾಗೂ ರೋವ್ಮನ್ ಪೋವೆಲ್ ಭಾರತೀಯ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಈ ಜೋಡಿ ಮುರಿಯದ 76 ರನ್ಗಳ ಜೊತೆಯಾಟ ಆಡಿದರು. ಈ ವೇಳೆ ಹೋಲ್ಡರ್ ( ಅಜೇಯ 37 ರನ್) ಹಾಗೂ ರೋವ್ಮನ್ ಪೋವೆಲ್ (ಅಜೇಯ 34 ರನ್) ಬಾರಿಸಿದರು.
ಭಾರತದ ಪರ ಅಮೋಘ ಬೌಲಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ 2 ವಿಕೆಟ್, ಹಾರ್ದಿಕ್ ಪಾಂಡ್ಯ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.








