ಕೊಲೊಂಬೊ: ಬೌಲರ್ಗಳ ಸಂಘಟಿಯ ಪ್ರಯತ್ನದ ಫಲವಾಗಿ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 41 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ ಏಷ್ಯಾ ಕಪ್ ಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ 49.1 ಓವರ್ಗಳಲ್ಲಿ 213 ರನ್ ಗಳಿಸಿತು. ಗೆಲುವಿಗೆ 214 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಭಾರತೀಯ ಬೌಲರ್ಗಳ ದಾಳಿಗೆ ತತ್ತರಿಸಿ 41.3 ಓವರ್ಗಳಲ್ಲಿ
172 ರನ್ಗೆ ಆಲ್ಓಟ್ ಆಯಿತು. ಶ್ರೀಲಂಕಾ ಪರ ಧನಂಜಯ ಡಿಸಿಲ್ವಾ (41 ) ಮತ್ತು ಧುನಿತ್ ವೆಲ್ಲಾಲಗೆ (ಅಜೇಯ 42) ಗೆಲುವಿಗಾಗಿ ಹೋರಾಟ ನಡೆಸಿದರೂ ಭಾರತದ ಬೌಲರ್ಗಳ ಸಂಘಟಿತ ದಾಳಿಯ ಮುಂದೆ ಗೆಲುವಿನೆಡೆಗೆ ಮುನ್ನಡೆಸಲು ಸಾಧ್ಯವಾಗಲಿಲ್ಲ.
ಭಾರತದ ಪರ ಕುಲ್ದೀಪ್ ಯಾದವ್ ಮತ್ತೊಮ್ಮೆ ಮಿಂಚಿದರು. ಕುಲ್ದೀಪ್ 9.3 ಓವರ್ಗಳಲ್ಲಿ 43 ರನ್ ನೀಡಿ 4 ವಿಕೆಟ್ ಪಡೆದರು.
ಜಸ್ಪೀತ್ ಬುಮ್ರಾ,ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ಮಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಶ್ರೀಲಂಕಾದ ಸ್ಪಿನ್ ದಾಳಿ ಎದುರು ಭಾರತ ಸಾಧಾರಣ ಮೊತ್ತಕ್ಕೆ ಕುಸಿಯಿತು. ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ (53) ಹಾಗೂ ಶುಭಮನ್ ಗಿಲ್ (19) ಮೊದಲ ವಿಕೆಟ್ಗೆ ಕೇವಲ 11.1 ಓವರ್ಗಳಲ್ಲಿ 80 ರನ್ ಗಳಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು.ತಂಡದ ಮೊತ್ತ 80 ರನ್ ಆಗಿದ್ದಾಗ ಗಿಲ್ ಔಟಾದರು. ಬಳಿಕ ಬಂದ ವಿರಾಟ್ ಕೊಹ್ಲಿ ಆಟ ಕೇವಲ 3 ರನ್ಗಳಿಗೆ ಕೊನೆಗೊಂಡಿತು.
ಇವರಿಬ್ಬರ ವಿಕೆಟ್ ಪತನದ ಬೆನ್ನಲ್ಲೇ ರೋಹಿತ್ ಶರ್ಮಾ ಸಹ ಔಟಾದರು. ಈ ಮೂವರಿಗೂ ದುನಿತ್ ವೆಲ್ಲಲಗೆ ಪೆವಿಲಿಯನ್ ದಾರಿ ತೋರಿದರು. ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ ಅರ್ಧಶತಕದ ಜೊತೆಯಾಟವಾಡಿದ ಇಶಾನ್ ಕಿಶನ್ ಮತ್ತು ಕೆ.ಎಲ್.ರಾಹುಲ್ ಜೋಡಿಯನ್ನು ಬೇರ್ಪಡಿಸುವ ಮೂಲಕ ವೆಲ್ಲಲಗೆ ಮತ್ತೆ ಪೆಟ್ಟು ಕೊಟ್ಟರು. 39 ರನ್ ಗಳಿಸಿದ್ದ ರಾಹುಲ್, ವೆಲ್ಲಲಗೆ ಬೌಲಿಂಗ್ನಲ್ಲಿ ಅವರಿಗೇ ಕ್ಯಾಚ್ ನೀಡಿ ಕ್ರೀಸ್ ತೊರೆದರು.
ರಕ್ಷಣಾತ್ಮಕವಾಗಿ ಆಡುತ್ತಿದ್ದ ಕಿಶನ್ (33), ರವೀಂದ್ರ ಜಡೇಜ (4) ಜಸ್ಪ್ರೀತ್ ಬೂಮ್ರಾ (5) ಹಾಗೂ ಕುಲದೀಪ್ ಯಾದವ್ (0) ಚರಿತ ಅಸಲಂಕಗೆ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ ಮತ್ತು ಮೊಹಮದ್ ಸಿರಾಜ್ ಹತ್ತನೇ ವಿಕೆಟ್ ಪಾಲುದಾರಿಕೆಯಲ್ಲಿ 27 ರನ್ ಸೇರಿಸಿದರು. ಹೀಗಾಗಿ ಭಾರತ ತಂಡ 49.1 ಓವರ್ಗಳಲ್ಲಿ 213 ರನ್ ಗಳಿಸಿ ಸರ್ವಪತನ ಕಂಡಿತು. ವೆಲ್ಲಲಗೆ 10 ಓವರ್ಗಳಲ್ಲಿ 40 ರನ್ ನೀಡಿ 5 ವಿಕೆಟ್ ಕಿತ್ತರು. ಅವರಿಗೆ ಸಾಥ್ ನೀಡಿದ ಅಸಲಂಕ, 9 ಓವರ್ಗಳಲ್ಲಿ ಕೇವಲ 18ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಇನ್ನೊಂದು ವಿಕೆಟ್ ಮಹೀಶ ತೀಕ್ಷಣ ಪಾಲಾಯಿತು.