ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಮತ್ತು140 ರನ್ಗಳ ಬೃಹತ್ ಗೆಲುವು ಸಾಧಿಸಿದೆ.
286 ರನ್ಗಳ ಹಿನ್ನೆಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ವಿಂಡೀಸ್ ರವೀಂದ್ರ ಜಡೇಜ ಹಾಗೂ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ನಲುಗಿ ತನ್ನ 2ನೇ ಇನಿಂಗ್ಸ್ನಲ್ಲಿ ಕೇವಲ 146 ರನ್ಗಳಿಗೆ ಸರ್ವಪತನ ಕಾಣುವ ಮೂಲಕ ಇನಿಂಗ್ಸ್ ಹಾಗೂ
140 ರನ್ಗಳ ಸೋಲು ಅನುಭವಿಸಿತು.ವಿಂಡೀಸ್ ಪರ ಅಲಿಕ್ ಅಥಾನಾಜೆ 38 ರನ್ ಗಳಿಸಿದ್ದು ವೈಯಕ್ತಿಕ ಗರಿಷ್ಠ ರನ್ ಸ್ಕೋರ್ ಎನಿಸಿಕೊಂಡರೆ, ಜಸ್ಟೀನ್ ಗ್ರೀವ್ಸ್ 25 ರನ್ ಸಿಡಿಸಿ ಕೊಂಚ ಹೋರಾಟ ನಡೆಸಿದರು. ಅಂತಿಮವಾಗಿ ಜೇಡನ್ ಸೀಲ್ಸ್ 22 ರನ್ ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಸಿರಾಜ್ 3, ಕುಲದೀಪ್ ಯಾದವ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದು ಮಿಂಚಿದರು. ವೆಸ್ಟ್ ಇಂಡೀಸ್ 3ನೇ ದಿನ ಕೇವಲ 2 ಸೆಷನ್ಗಳಲ್ಲೇ 45.1 ಓವರ್ಗಳಲ್ಲಿ 146 ರನ್ಗಳಿಗೆ ಆಲೌಟ್ ಆಗುವ ಮೂಲಕ ದೊಡ್ಡ ಅಂತರದಿಂದ ಸೋಲು ಕಂಡಿತು.
ವೆಸ್ಟ್ ಇಂಡೀಸ್ ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 162 ರನ್ಗಳಿಗೆ ಆಲೌಟ್ ಆಗುವ ಮೂಲಕ ನಿರಾಸೆ ಅನುಭವಿಸಿತು.
ಭಾರತ ಕೆ.ಎಲ್.ರಾಹುಲ್ (100), ಧ್ರುವ್ ಜುರೆಲ್ (125) ಹಾಗೂ ರವೀಂದ್ರ ಜಡೇಜಾ (104 ಅಜೇಯ) ಬ್ಯಾಟಿಂಗ್ ಶತಕಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಇನ್ನೀಂಗ್ಸ್ ಡಿಕ್ಲೇರ್ ಮಾಡಿ 286 ರನ್ಗಳ ಬೃಹತ್ ಮುನ್ನಡೆ ಸಾಧಿಸಿತು.









