ಮುಂಬೈ:ಭಾರತದ ತ್ರಿವಳಿ ವೇಗದ ಬೌಲಿಂಗ್ ದಾಳಿಗೆ ನಲುಗಿದ ಶ್ರಿಲಂಕಾ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ 55 ರನ್ಗೆ ಆಲ್ ಔಟ್ ಆಗಿದೆ. ಭಾರತ ದಾಖಲೆಯ 302 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿತು. ಈ ವಿಶ್ವಕಪ್ನಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತ ಆಡಿದ ಏಳು ಪಂದ್ಯಗಳನ್ನು ಗೆದ್ದು ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿತು. 14 ಅಂಕ ಪಡೆದಿರುವ ಭಾರತ
ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. ಭಾರತ ನೀಡಿದ 358 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾಕ್ಕೆ ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಸಿರಾಜ್ ಹಾಗೂ ಮಹಮ್ಮದ್ ಶಮಿ ಭಾರೀ ಆಘಾತ ನೀಡಿದರು. ಸ್ಕೋರ್ ಬೋರ್ಡ್ನಲ್ಲಿ ಕೇವಲ 3 ರನ್ ಸೇರಿಸುವಾಗ ಲಂಕಾದ 4 ವಿಕೆಟ್ ಪತನಗೊಂಡಿತು. 14 ರನ್ ಆಗುವಾಗ 6 ಮಂದಿ ಬ್ಯಾಟರ್ಗಳು ಫೆವಿಲಿಯನ್ ಸೇರಿದ್ದರು. ಅಂತಿಮವಾಗಿ ಶ್ರೀಲಂಕಾ 19.4 ಓವರ್ಗಳಲ್ಲಿ 55 ರನ್ಗೆ ಸರ್ವ ಪತನ ಕಂಡಿತು.ಈ ಮೂಲಕ ಭಾರತ ವಿಶ್ವಕಪ್ ಕ್ರಿಕೆಟ್ನ ದಾಖಲೆ ಅಂತರದ ಜಯ ದಾಖಲಿಸಿತು. 14ರನ್ ಗಳಿಸಿದ ಕಸೂನ್ ರಜಿತ ಲಂಕಾದ ಟಾಪ್ ಸ್ಕೋರರ್ ಆದರು.

ಮಹಮ್ಮದ್ ಶಮಿ ಈ ವಿಶ್ವಕಪ್ನಲ್ಲಿ ಎರಡನೇ ಬಾರಿ 5 ವಿಕೆಟ್ ಗೊಂಚಲು ಪಡೆದರು. ಶಮಿ 18 ರನ್ ನೀಡಿ 5 ವಿಕೆಟ್ ಪಡೆದರೆ, ಮಹಮ್ಮದ್ ಸಿರಾಜ್ 16 ರನ್ ನೀಡಿ 3 ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಉರುಳಿಸಿದರು. ಮಹಮ್ಮದ್ ಶಮಿ ಪ್ಲೆಯರ್ ಆಫ್ ದಿ ಮ್ಯಾಚ್ ಆದರು.
ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಭಾರತಕ್ಕೆ ಮೊದಲ ಓವರ್ನಲ್ಲಿಯೇ 4 ರನ್ ಗಳಿಸಿದ ನಾಯಕ ರೋಹಿತ್ ಶರ್ಮ ವಿಕೆಟ್ ನಷ್ಟವಾಯಿತು. ಬಳಿಕ ವಿರಾಟ್ ಕೊಹ್ಲಿ ಹಾಗೂ ಶುಭ್ಮನ್ ಗಿಲ್ ಎರಡನೇ ವಿಕೆಟ್ಗೆ 189 ರನ್ಗಳ ಭರ್ಜರಿ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸ್ಪೋಟಕ ಇನ್ನಿಂಗ್ಸ್ ಕಟ್ಟಿದರು. ಗಿಲ್ 92 ಎಸೆತಗಳಲ್ಲಿ 11 ಬೌಂಡರಿ ಹಾಗು 2 ಸಿಕ್ಸರ್ ನೆರವಿನಿಂದ 92 ರನ್ ಗಳಿಸಿದರು.ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ 88 ರನ್ ಗಳಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 56 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ 82 ರನ್ ಗಳಿಸಿದರು. ಜಡೇಜ 24 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 35 ರನ್ ಬಾರಿಸಿದರು. ಕೆ.ಎಲ್.ರಾಹುಲ್ 21, ಸೂರ್ಯಕುಮಾರ್ ಯಾದವ್ 12 ರನ್ ಗಳಿಸಿದರು. ಶ್ರೀಲಂಕಾ ಪರ ದಿಲ್ಸನ್ ಮಧುಸಂಕ 5 ವಿಕೆಟ್ ಪಡೆದರು.









