ನ್ಯೂಯಾರ್ಕ್: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಿರುಗಾಳಿ ಬೌಲಿಂಗ್ ಮುಂದೆ ಕುಸಿದ ಪಾಕಿಸ್ತಾನವನ್ನು 6 ರನ್ಗಳಿಂದ ಮಣಿಸಿದ ಭಾರತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿತು.ಮೊದಲು ಬ್ಯಾಟ್ ಮಾಡಿದ ಭಾರತ 19 ಓವರ್ಗಳಿಗೆ ಕೇವಲ 119 ರನ್ಗಳನ್ನು ಗಳಿಸಿ ಆಲ್ಔಟ್ ಆಯಿತು. 120 ರನ್ ಸಾಧಾರಣ ಗುರಿ ಬೆನ್ಬಟ್ಟಿದ ಪಾಕಿಸ್ತಾನ
20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಬಾರಿಸಿ ಸೋಲೋಪ್ಪಿಕೊಂಡಿತು 10 ಓವರ್ಗಳಲ್ಲಿ 2 ವಿಕೆಟ್ ನಷ್ಡಕ್ಕೆ 70 ರನ್ ಗಳಿಸಿ ಗೆಲುವಿನೆಡೆಗೆ ಮುನ್ನುಗ್ಗಿದ್ದ ಪಾಕಿಸ್ತಾನವನ್ನು ಬುಮ್ರಾ ತಮ್ಮ ಅದ್ಭುತ ಬೌಲಿಂಗ್ ಮೂಲಕ ನಿಯಂತ್ರಿಸಿದರು. ಬುಮ್ರಾ 4 ಓವರ್ಗಳಲ್ಲಿ ಕೇವಲ 14 ರನ್ ನೀಡಿ ಪಾಕ್ನ ಪ್ರಮುಖ ಮೂರು ವಿಕೆಟ್ಗಳನ್ನು ಕಿತ್ತರು. ಹಾರ್ದಿಕ್ ಪಾಂಡ್ಯ 2 , ಹರ್ಷದೀಪ್ ಸಿಂಗ್ ಹಾಗೂ ಅಕ್ಸರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಪಾಕಿಸ್ತಾನದ ಪರ ಮಹಮ್ಮದ್ ರಿಸ್ವಾನ್ 31 ರನ್, ನಾಯಕ್ ಬಾಬರ್ ಅಝಂ 13, ಇಮಾದ್ ವಸೀಂ15 ರನ್ ಬಾರಿಸಿದರು. ರಿಷಭ್ ಪಂತ್ ಮೂರು ಕ್ಯಾಚ್ ಹಿಡಿಯುವ ಮೂಲಕ ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಬ್ಯಾಟರ್ಗಳು ನೀರಸ ಪ್ರದರ್ಶನ ನೀಡಿದರು.ಭಾರತದ ರಿಷಭ್ ಪಂತ್ 42 ರನ್ ಹಾಗೂ ಅಕ್ಷರ್ ಪಟೇಲ್ 20 ರನ್ ಹಾಗೂ ರೋಹಿತ್ ಶರ್ಮಾ 13 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದವರು ಎರಡಂಕಿ ವೈಯಕ್ತಿಕಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಆಮಿರ್ ಎರಡು ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.