ದುಬೈ: ಏಷ್ಯಾಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ 7 ವಿಕೆಟ್ ಅಂತರದ ಸುಲಭ ಜಯ ಸಾಧಿಸಿತು.ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಪಡೆ ನಿಗದಿತ 20 ಓವರ್ಗಳಲ್ಲಿ
9 ವಿಕೆಟ್ಗಳನ್ನು ಕಳೆದುಕೊಂಡು 127 ರನ್ ಗಳಿಸಲಷ್ಟೇ ಶಕ್ತವಾಯಿತು.ಈ ಗುರಿ ಭಾರತಕ್ಕೆ ಸವಾಲೇ ಆಗಲಿಲ್ಲ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (13 ಎಸೆತ, 31 ರನ್) ಬೀಸಾಟ, ನಾಯಕ ಸೂರ್ಯಕುಮಾರ್ ಯಾದವ್ (ಅಜೇಯ 47 ರನ್) ಹಾಗೂ ತಿಲಕ್ ವರ್ಮಾ ಅವರ (31 ರನ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 15.5 ಓವರ್ಗಳಲ್ಲೇ 131 ರನ್ ಗಳಿಸಿ ಜಯದ ನಗೆ ಬೀರಿತು.
ಇದಕ್ಕೂ ಮೊದಲು ಭಾರತದ ಬಿಗು ಬೌಲಿಂಗ್ ದಾಳಿಗೆ ಪಾಕಿಸ್ತಾನ ಅಲ್ಪ ಮೊತ್ತಕ್ಕೆ ಕುಸಿಯಿತು. ಮೊದಲ ಎರಡು ಓವರ್ನಲ್ಲಿ ಎರಡು ವಿಕೆಟ್ ಕಳೆದುಕೊಂಡ ಪಾಕ್ 64 ರನ್ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 98 ರನ್ಗೆ 8 ವಿಕೆಟ್ ನಷ್ಟವಾದ ಪಾಕ್ಗೆ ಕೊನೆಯಲ್ಲಿ ಶಾಹಿನ್ ಷಾ ಅಫ್ರಿದಿ 4 ಸಿಕ್ಸರ್ ಸಹೀತ 16 ಎಸೆತದಲ್ಲಿ ಅಜೇಯ 33 ರನ್ ಸಿಡಿಸಿ ಅಲ್ಪ ಚೇತರಿಕೆ ನೀಡಿದರು. ಸಾಹಿಬ್ಸಾದಾ ಫರ್ಹಾನ್ 40 ರನ್ ಗಳಿಸಿದರು.ಭಾರತದ ಪರ ಕುಲ್ದೀಪ್ ಯಾದವ್ 3, ಜಸ್ಪ್ರೀತ್ ಬುಮ್ರಾ ಹಾಗು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಉರುಳಿಸಿದರು.












