ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 295 ರನ್ ಅಂತರದ ಭಾರಿ ಗೆಲುವು ಸಾಧಿಸಿದೆ. ಇದು ಏಷ್ಯಾ ಖಂಡದ ಹೊರಗೆ ಟೀಂ ಇಂಡಿಯಾಗೆ ರನ್ ಅಂತರದಲ್ಲಿ ದೊರೆತ ಅತಿದೊಡ್ಡ ಗೆಲುವಾಗಿದೆ.ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ನಾಯಕ ಜಸ್ಪ್ರಿತ್ ಬೂಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ
30 ರನ್ ನೀಡಿ 5 ವಿಕೆಟ್ ಪಡೆದಿದ್ದ ಅವರು, ಎರಡನೇ ಇನಿಂಗ್ಸ್ನಲ್ಲಿ 42 ರನ್ಗೆ 3 ವಿಕೆಟ್ ಪಡೆದರು. ಪಂದ್ಯದ ಗೆಲುವಿಗೆ ಭಾರತ 534 ರನ್ಗಳ ಕಠಿಣ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಆತಿಥೇಯ ತಂಡ, 238 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಅದರೊಂದಿಗೆ ಭಾರತದ ಎದುರು ತವರಿನಲ್ಲಿ (ರನ್ ಅಂತರದಲ್ಲಿ) ಎರಡನೇ ಅತಿದೊಡ್ಡ ಮುಖಭಂಗ ಅನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆಸ್ಟ್ರೇಲಿಯನ್ನರ ವೇಗದ ದಾಳಿ ಎದುರು ತತ್ತರಿಸಿತ್ತು. ಮೊದಲ ಇನಿಂಗ್ಸ್ನಲ್ಲಿ ಕೇವಲ 150 ರನ್ಗಳಿಸಿ ಆಲೌಟ್ ಆಗಿತ್ತು. ಆದರೆ, ಬೌಲಿಂಗ್ ವೇಳೆ ಮರು ಹೋರಾಟ ನಡೆಸಿ, 46 ರನ್ಗಳ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಮುಂಚೂಣಿಯಲ್ಲಿ ನಿಂತು ಭಾರತದ ಹೋರಾಟಕ್ಕೆ ಸ್ಫೂರ್ತಿ ತುಂಬಿದ ನಾಯಕ ಬೂಮ್ರಾ, ಪ್ರಮುಖ ಐದು ವಿಕೆಟ್ಗಳನ್ನು ಉರುಳಿಸಿದರು. ಅವರ ಆಟದಿಂದ ಪ್ರೇರಣೆ ಪಡೆದ ಇತರ ವೇಗಿಗಳು, ಲಯಬದ್ಧ ಎಸೆತಗಳನ್ನು ಪ್ರಯೋಗಿಸಿದರು.ಅದೇ ಲಯವನ್ನು ಬ್ಯಾಟರ್ಗಳು ಎರಡನೇ ಇನಿಂಗ್ಸ್ನಲ್ಲಿ ಮುಂದುವರಿಸಿದರು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (161 ರನ್), ‘ರನ್ ಮಷಿನ್’ ಖ್ಯಾತಿಯ ವಿರಾಟ್ ಕೊಹ್ಲಿ (ಅಜೇಯ 100 ರನ್) ಆಕರ್ಷಕ ಶತಕ ಸಿಡಿಸಿದರೆ, ಕನ್ನಡಿಗ ಕೆ.ಎಲ್.ರಾಹುಲ್ ಅವರ ಅರ್ಧಶತಕ (77 ರನ್) ಗಳಿಸಿ ಮಿಂಚಿದರು.ತಂಡದ ಮೊತ್ತ 6 ವಿಕೆಟ್ಗೆ 487 ರನ್ ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್ ಘೋಷಿಸಿದ ಬೂಮ್ರಾ, ಮೂರನೇ ದಿನದಾಟ ಮುಕ್ತಾಯಕ್ಕೆ ಕೆಲಹೊತ್ತಿದ್ದಾಗಲೇ ಎದುರಾಳಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಈ ತಂತ್ರ ಯಶಸ್ವಿಯೂ ಆಯಿತು.
534 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಕಾಂಗರೂ ಪಡೆ, 2ನೇ ಇನಿಂಗ್ಸ್ನಲ್ಲೂ ಮುಗ್ಗರಿಸಿತು.
3ನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ಗಳನ್ನು ಕಳೆದುಕೊಂಡು 12 ರನ್ ಗಳಿಸಿದ್ದ ಆಸಿಸ್, ಮರುದಿನವೂ ಒತ್ತಡದಲ್ಲೇ ಬ್ಯಾಟಿಂಗ್ ಮುಂದುವರಿಸಿತು. ಇದರ ಲಾಭ ಪಡೆದ ಟೀಂ ಇಂಡಿಯಾ ವೇಗಿಗಳು ಮೇಲುಗೈ ಸಾಧಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಸ್ ಹೆಡ್ (89 ರನ್), ಮಿಚೇಲ್ ಮಾರ್ಷ್ (47 ರನ್) ಮತ್ತು ಅಲೆಕ್ಸ್ ಕ್ಯಾರಿ (36 ರನ್) ಹೋರಾಟ ನಡೆಸಿದರೂ, ಸೋಲು ತಪ್ಪಿಸಿಕೊಳ್ಳಲು ಸಾಕಾಗಲಿಲ್ಲ.ಮತ್ತೆ ಮಿಂಚಿದ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಮೂರು ವಿಕೆಟ್ ಕಬಳಿಸಿದರು. ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಪಡೆದರೆ, ಹರ್ಷಿತ್ ರಾಣಾ, ನಿತೀಶ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.