ಸುಳ್ಯ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಪ್ರಯತ್ನ ನಡೆಸಲಿದೆ ಎಂದು ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳಾದ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಹಾಗೂ ಸಿಪಿಐಎಂ ಪಕ್ಷಗಳ ಮುಖಂಡರು ಹೇಳಿದ್ದಾರೆ.ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಹಾಗು ಕೇಂದ್ರದಲ್ಲಿ ಬದಲಾವಣೆ ಆಗಲಿದೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ’ ಇಂಡಿಯಾ ಒಕ್ಕೂಟದ ಪಕ್ಷಗಳ ಸಭೆ ಸುಳ್ಯದಲ್ಲಿ
ನಡೆಸಲಾಗಿದೆ. ಇಂಡಿಯಾ ಒಕ್ಕೂಟದ ಅಭ್ಯರ್ಥಿ ಪದ್ಮರಾಜ್ ಅವರ ಗೆಲುವಿಗೆ ಎಲ್ಲಾ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲಿದೆ.ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಒಕ್ಕೂಟ ರೂಪಿಸಲಾಗಿದ್ದು ಅದರಂತೆ ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ಇಂಡಿಯಾ
ಒಕ್ಕೂಟದ ಪಕ್ಷಗಳು ಪದ್ಮರಾಜ್ ಅವರ ಗೆಲುವಿಗೆ ಪ್ರಯತ್ನ ನಡೆಸಲಿದೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ್ ಎಡಮಲೆ ಮಾತನಾಡಿ’ ರಾಷ್ಟ್ರದ ಹಿತ ದೃಷ್ಠಿಯಿಂದ, ಪ್ರಜಾಪ್ರಭುತ್ವದ, ಸಂವಿಧಾನದ ಉಳಿವಿಗಾಗಿ ಬಿಜೆಪಿ ವಿರೋಧಿ ಪಕ್ಷಗಳು ಒಟ್ಟಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಆರ್ಥಿಕ ಅಸಮಾನತೆ, ನಿರುದ್ಯೋಗ ಸಮಸ್ಯೆಯ ಜೊತೆಗೆ ಇಡಿ, ಐಟಿ, ಸಿಬಿಐ ಬಳಸಿ ಪ್ರತಿಪಕ್ಷಗಳನ್ನು ಮಟ್ಟ ಹಾಕುವ ಪ್ರಯತ್ನ ನಡೆಯುತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ರೂಪಿಸಲಾದ ಇಂಡಿಯಾ ಒಕ್ಕೂಟದಡಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಯತ್ನ ನಡೆಸಲಿದೆ ಎಂದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಕೆ.ಪಿ.ರಾಬರ್ಟ್ ಡಿಸೋಜ ಮಾತನಾಡಿ’ ಬೆಲೆ ಏರಿಕೆ, ನಿರುದ್ಯೋಗ, ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿಯಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದೆ. ಜನ ಸಾಮಾನ್ಯರನ್ನು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಲು ಈ ಬಾರಿ ದೇಶದಲ್ಲಿ ಬದಲಾವಣೆ ಬೇಕಾಗಿದೆ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ’ ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಇಂಡಿಯಾ ಒಕ್ಕೂಟದ ಅಲೆ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಬೀಸುತಿದೆ. ಭಾವನಾತ್ಮಕ ವಿಚಾರಗಳ ಆಧಾರದಲ್ಲಿ ಮತ ಹಾಕಿದರೆ ಬದುಕು ಇಲ್ಲಾ ಎಂದು ಜನತೆ ಅರ್ಥ ಮಾಡಿಕೊಂಡಿದ್ದಾರೆ. ಆದುದರಿಂದ ಜನತೆಗೆ ಬದುಕು ಕೊಟ್ಟ ಗ್ಯಾರಂಟಿ ಯೋಜನೆಗಳಿಗೆ ಈ ಬಾರಿ ಜನರು ಮತ ಹಾಕಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಯನ್ನು ಬಿಜೆಪಿಯವರು ಬಿಡುತ್ತಾರೆಯೇ..?
ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಬಿಟ್ಟಿ ಯೋಜನೆಗಳು ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗೆ ಹೇಳುವ ಬಿಜೆಪಿಯವರು ನಮಗೆ ಗ್ಯಾರಂಟಿ ಯೋಜನೆ ಬೇಡ ಎಂದು ಹೇಳಲಿ, ಅದು ಬಿಟ್ಟು ಸರಕಾರದ ಯೋಜನೆಗಳನ್ನು ಅನುಭವಿಸಿ ಅದರ ವಿರುದ್ಧ ಮಾತನಾಡುವ ಬಿಜೆಪಿಗರು ನೈತಿಕತೆ ಇದ್ದರೆ ಗ್ಯಾರಂಟಿ ಯೋಜನೆಯನ್ನು ಸ್ವಿಕರಿಸುವುದಿಲ್ಲ ಎಂದು ಘೋಷಿಸಲಿ ಎಂದು ಭರತ್ ಮುಂಡೋಡಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಉಸ್ತುವಾರಿ ಎಂ.ವೆಂಕಪ್ಪ ಗೌಡ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫಾ, ಅಮ್ ಆದ್ಮಿ ಪಕ್ಷದ ಮುಖಂಡರಾದ ರಶೀದ್ ಜಟ್ಟಿಪಳ್ಳ, ಖಲಂದರ್ ಎಲಿಮಲೆ, ಖಲಂದರ್ ಶಾಫಿ ಹಳೆಗೇಟು ಉಪಸ್ಥಿತರಿದ್ದರು.