ಹೊಸದಿಲ್ಲಿ:ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಇಂಡಿಯಾ ಮೈತ್ರಿಕೂಟದ ಸಭೆ ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆಯಿತು. ಸಭೆಯ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಮೈತ್ರಿಕೂಟಕ್ಕೆ ಸಿಕ್ಕಿರುವ ಅಗಾಧ ಬೆಂಬಲಕ್ಕಾಗಿ ಭಾರತದ ಜನತೆಗೆ ಇಂಡಿಯಾ ಬಣದ ಕಡೆಯಿಂದ ಧನ್ಯವಾದಗಳು. ಮೈತ್ರಿಕೂಟದ ಪಕ್ಷಗಳು ವಿರೋಧ ಪಕ್ಷವಾಗಿ ಮುಂದುವರಿಯಲಿದೆ.ಸೂಕ್ತವಾದ ಸಂದರ್ಭದಲ್ಲಿ
ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು. ಮೈತ್ರಿಗೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಸೇರ್ಪಡೆಗೊಳ್ಳಬಹುದು ಎನ್ನುವ ಮುಕ್ತ ಆಹ್ವಾನವನ್ನು ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ. ನಾವು ತುಂಬಾ ಚೆನ್ನಾಗಿ ಮತ್ತು ಒಗ್ಗಟ್ಟಿನಿಂದ ಹೋರಾಡಿದ್ದೇವೆ . ಸಂವಿಧಾನದಲ್ಲಿ ಬರೆದಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಗೌರವಿಸುವ ಎಲ್ಲ ಪಕ್ಷಗಳನ್ನು ಒಕ್ಕೂಟ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ. ಸೋನಿಯಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎನ್ಸಿಪಿ (ಎಸ್ಸಿಪಿ) ನ ಶರದ್ ಪವಾರ್ ಮತ್ತು ಅವರ ಪುತ್ರಿ ಸುಪ್ರಿಯಾ ಸುಳೆ, ಶಿವಸೇನೆಯ (ಉದ್ಧವ್ ಬಣ) ಸಂಜಯ್ ರಾವುತ್, ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ಆರ್ಜೆಡಿಯ ತೇಜಸ್ವಿ ಯಾದವ್, ಡಿಎಂಕೆ ಸೇರಿದಂತೆ ಹಲವು ನಾಯಕರು ನಾಯಕ ಎಂಕೆ ಸ್ಟಾಲಿನ್, ಜಾರ್ಖಂಡ್ ಸಿಎಂ ಚಂಪೈ ಸೊರೆನ್ ಮತ್ತು ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ, ಎಎಪಿ ನಾಯಕ ರಾಘವ್ ಚಡ್ಡಾ ಮತ್ತು ಸಿಪಿಐ(ಎಂ) ನ ಸೀತಾರಾಮ್ ಯೆಚೂರಿ ಸಭೆಯಲ್ಲಿ ಉಪಸ್ಥಿತರಿದ್ದರು.














