ಸುಳ್ಯ:ಮಾಮರವೆಲ್ಲೋ… ಕೋಗಿಲೆ ಎಲ್ಲೋ….? ವಸಂತಕಾಲ ಬಂದಾಗ..ಮಾವು ಚಿಗುರಲೇ ಬೇಕು.. !!
ಹೌದು..ಈಗ ಹೊರ ಬಂದು ಪ್ರಕೃತಿಯತ್ತ ಕಣ್ಣಾಡಿಸಿದರೆ ಮನಸ್ಸಿಗೆ ಈ ಹಾಡುಗಳು ಓಡೋಡಿ ಬರತ್ತವೆ.. ಕಿವಿಯಲ್ಲಿ ಈ ಹಾಡುಗಳು ಗುಂಯ್ ಗುಟ್ಟಿದಂತೆ ಭಾಸವಾಗುತ್ತದೆ. ಕೋಗಿಲೆಯ ನಾದ ಮನಸ್ಸಿನ ಆಳಕ್ಕೆ ಇಳಿಯುತ್ತದೆ.ಮಳೆ ದೂರವಾಗಿ ವಸಂತ ಕಾಲ ಬಂದು ಎಲ್ಲೆಡೆ ಪ್ರಕೃತಿಯ ಸೌಂದರ್ಯ ಇಮ್ಮಡಿಗೊಂಡು ಫಲ ವಸ್ತುಗಳು ಹೂಬಿಟ್ಟು
ನಳ ನಳಿಸುತಿದೆ.ಮಾವು,ಹಲಸು, ಗೇರು ಸೇರಿದಂತೆ ಎಲ್ಲೆಡೆ ಹೂಬಿಟ್ಟು ಮನಸೂರೆಗೊಳ್ಳುತಿದೆ. ಪ್ರಕೃತಿಯೇ ಮದುವಣಗಿತ್ತಿಯಂತೆ ಸುಂದರವಾಗಿ ಕಾಣುತಿದೆ. ಅದರಲ್ಲೂ ಮಾವಿನ ಮರಗಳ ಸೊಬಗು ಹೇಳವತೀರದು.. ಮಾವಿನ ಮರಗಳೆಲ್ಲವೂ ಮೈಪೂರ್ತಿ ಹೂಬಿಟ್ಟು ಮನಮೋಹಕವಾಗಿ ಅರಳಿ ನಿಂತಿದೆ. ಮಾವಿನ ಮರಗಳು ಈ ರೀತಿ ಅರಳಿಕೊಳ್ಳುವುದು ಅಪರೂಪ. ಕೆಲವು ವರ್ಷಗಳಲ್ಲಿ ಮಾವಿನ ಮರಗಳು ಹೂ ಬಿಡುವುದೇ ಅಪರೂಪ. ಈ ಬಾರಿಯಂತೂ ಎಲ್ಲೆಂದರಲ್ಲಿ ಮಾವಿನ ಮರಗಳು ಮೈ ತುಂಬಾ ಹೂ ಬಿಟ್ಟು ಭರವಸೆ ಹುಟ್ಟಿಸಿದೆ. ಮರದ ರೆಂಬೆ, ಕೊಂಬೆಗಳು, ಎಲೆಗಳು ಕಾಣದೆ ಹೂವುಗಳು ಮಾತ್ರ ತುಂಬಿಕೊಂಡಿದೆ.
ಈ ಬಾರಿ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಕಾಡು ಮಾವಿನ ಮರ, ಕಾಡು ಮಾವಿನ ಮರಗಳು ಹೂ ಬಿಟ್ಟು ಕಂಗೊಳಿಸುತ್ತಿವೆ.

ಬೆಳ್ಳಾರೆ-ಪಂಜ ರಸ್ತೆ ಬದಿಯಲ್ಲಿ ಹೂ ಬಿಟ್ಟ ಮಾವಿನ ಮರ
ರಸ್ತೆ ಬದಿ, ಹೆದ್ದಾರಿ ಬದಿ, ತೋಟ, ಹಿತ್ತಲು, ಅರಣ್ಯ ಪ್ರದೇಶದಲ್ಲಿ ಹೀಗೆ ಕಾಡು, ಊರು ಭೇಧವಿಲ್ಲದೆ ಎಲ್ಲೆಡೆ ಮಾವಿನ ಮರಗಳು ಹೂವು ಬಿಟ್ಟಿದೆ. ಉತ್ತಮ ವಾತಾವರಣ ಈ ಬಾರಿ ಹೂ ಬಿಡಲು ಸಹಕಾರಿಯಾಗಿದೆ. ಕೆಲ ದಿನಗಳ ಹಿಂದೆ ಉತ್ತಮ ಚಳಿ, ಮಂಜು ಕವಿದ ವಾತಾವರಣ, ಉತ್ತಮ ಮಳೆಯಾಗಿರುವುದು ಕೂಡ ಮಾವು, ಹಲಸು ಹೂಬಿಡಲು ಕಾರಣವಾಗಿದೆ.
ಮಾವಿನ ಮರಗಳು ಹೂಬಿಟ್ಟಿರುವುದು ಈ ಬಾರಿ ಉತ್ತಮ ಹಣ್ಣುಗಳು ದೊರೆಯುವುದರ ಜೊತೆಗೆ ಉಪ್ಪಿನ ಕಾಯಿ ಉದ್ಯಮಕ್ಕೂ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಗ್ರಾಮೀಣ ಭಾಗಗಳಲ್ಲಿ ಉಪ್ಪಿನಕಾಯಿ ತಯಾರಿಸಲು ಕಾಡು ಮಾವಿನ ಮಿಡಿಗಳನ್ನು ಅತಿ ಹೆಚ್ಚು ಬಳಸಲಾಗುತ್ತದೆ. ಕಾಡು ಮಾವಿನ ಮಿಡಿಯ ಉಪ್ಪಿನಕಾಯಿ ಭಾರಿ ರುಚಿಕರ ಹಾಗೂ ಬಹು ಬೇಡಿಕೆ ಇದೆ.
ಈಗ ಬಿಟ್ಟ ಹೂವುಗಳೆಲ್ಲ ಮಿಡಿಯಾಗಿ ಮಾರ್ಪಾಡಾದರೆ ಗ್ರಾಮೀಣ ಭಾಗದ ಉಪ್ಪಿನಕಾಯಿ ಪ್ರಿಯರಿಗೆ ಸುಗ್ಗಿಯಾಗಲಿದೆ.

ಮಿಡಿ ಹಾಗೂ ಮಾವಿನ ಕಾಯಿಯ ಉಪ್ಪಿನ ಕಾಯಿಗೂ
ಬೇಡಿಕೆ ಇದ್ದೇ ಇದೆ. ಉಪ್ಪು, ಮೆಣಸಿನಲ್ಲಿ ಹಾಕುವ ಮಾವಿನ ಮಿಡಿ, ಕಾಯಿಯ ಉಪ್ಪಿನ ಕಾಯಿಗಳು ವರ್ಷಗಳ ಕಾಲ ಕೆಡದೇ ಉಳಿಯುತ್ತದೆ.
ಈ ಬಾರಿ ಹವಾಮಾನದ ಏರುಪೇರಿನ ನಡುವೆಯೂ ಮಾವಿನ ಮರಗಳು ಪಸಂದಾಗಿ ಹೂ ಬಿಟ್ಟಿವೆ. ರಸ್ತೆ ಬದಿಯಲ್ಲಿ, ಕಾಡುಗಳ ಮಧ್ಯೆ ತೋಟಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಮಾವಿನ ಮರಗಳು ಹೂಬಿಟ್ಟು ಕಂಗೊಳಿಸುತ್ತಿವೆ.
ಮಾವಿನ ಮರಗಳ ಜತೆಗೆ ಹಲಸಿನ ಮರಗಳೂ ಹೂಬಿಟ್ಟಿದೆ. ಮರದ ಕಾಂಡದ ತುಂಬಾ ಚಿಕ್ಕ ಚಿಕ್ಕ ಕಾಯಿಗಳು ಕಾಣಿಸಿಕೊಂಡಿದ್ದು ಹಲಸು ಕೂಡ ಉತ್ತಮ ಫಸಲು ನೀಡುವ ನಿರೀಕ್ಷೆ ಹುಟ್ಟಿಸಿದೆ.
ಹವಾಮಾನ ಉತ್ತಮವಾಗಿ ಮುಂದುವರಿದರೆ ಜನರಿಗೆ ಮಾವು ಮತ್ತು ಹಲಸಿನ ಹಣ್ಣುಗಳು ಯಥೇಚ್ಛವಾಗಿ ದೊರೆಯಬಹುದು. ಸುಳ್ಯ-ಬೆಳ್ಳಾರೆ-ಬಾಳಿಲ-ಪಂಜ ರಸ್ತೆಯಲ್ಲಿ ಸಾಗಿದರೆ ವಿವಿಧೆಡೆ ಮಾವಿನ ಮರ ಹೂಬಿಟ್ಟು ಕಂಗೊಳಿಸುವುದು ಮನ ಸೆಳೆಯುತ್ತದೆ.












