ಹನುಮಗಿರಿ: ಭಗವಂತನ ನಾಮದ ಜಪವನ್ನು ಪ್ರತಿ ಹಿಂದೂಗಳೂ ಮಾಡಬೇಕು, ಆ ಮೂಲಕ ಜೀವನದಲ್ಲಿ ನೆಮ್ಮದಿ, ಸಂತಸ ಪಡೆಯಲು,ಪುಣ್ಯ ಸಂಪಾದನೆ ಮಾಡಲು ಸಾಧ್ಯ, ರಾಮತಾರಕ ಮಂತ್ರ ಅದಕ್ಕೆ ಸರಳ ಮಂತ್ರ ಎಂದು ಕಾಂಚಿ ಕಾಮಕೋಟಿ ಪೀಠಾಧಿಪತಿ ಪರಮಪೂಜ್ಯ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ಹನುಮಗಿರಿ ಶ್ರೀ ಕೋದಂಡರಾಮ, ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ
ಅಂಗವಾಗಿ ಶನಿವಾರ ಕೋಟಿ ಶ್ರೀ ರಾಮತಾರಕ ಮಂತ್ರ ಮಹಾಯಜ್ಞದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಅವರು ಸಂದೇಶ ನೀಡಿದರು.ಸುಮಾರು ೧೩ ಸಾವಿರ ಮಂದಿ ಶ್ರೀರಾಮ ತಾರಕ ಜಪದೀಕ್ಷೆ ಪಡೆದು ಕರ್ನಾಟಕದ ಸಂಸ್ಕೃತಿ, ಭಾಷಾ ಸಾಹಿತ್ಯ ಪ್ರವಾಹದಲ್ಲಿ ಸ್ನಾನ ಮಾಡಿ ರಾಮಜಪ ಮಾಡಿರುವುದು ಸತ್ಪ್ರೇರಣೆ ನೀಡಲಿದೆ ಎಂದರು.
ಹನುಮಗರಿ ಕ್ಷೇತ್ರದಲ್ಲಿ ಸೇವಾ ಕಾರ್ಯಗಳಾಗಬೇಕು. ಲಘು ಉದ್ಯೋಗಗಳು ಇರಬೇಕು, ಪ್ರಕೃತಿಯ ಸಂರಕ್ಷಣೆಯೂ ಆಗಬೇಕು. ವಿಶೇಷ ಆರ್ಥಿಕ ವಲಯ ಆಗಬೇಕು. ಆರ್ಥಿಕ ಅಭಿವೃದ್ಧಿಯ ಜತೆಗೆ, ಧರ್ಮ ರಕ್ಷಣೆಯ ಕಾರ್ಯ ನಿರಂತರವಾಗಿ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ ‘ಕೋಟಿ ರಾತಾರಕ ಜಪಯಜ್ಞ ಯಾಗದ ಮೂಲಕ ಸತ್ ಪರಿವರ್ತನೆ ಆಗಲಿದೆ. ಕಲಿತ ಜಪವನ್ನು ಜೋಪಾನ ಮಾಡಿಕೊಂಡು ಅನುಸರಿಸಬೇಕು ಎಂದು ಹೇಳಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂ ಸಮಾಜದ ಶ್ರೇಯಸ್ಸಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಇಂತಹ ಸತ್ಕರ್ಮಗಳು ಆಗಬೇಕು. ಧರ್ಮ ಸುಖದಲ್ಲಿದ್ದರೆ ಎಲ್ಲವೂ ಸುಖಕರವಾಗಿರುತ್ತದೆ ಎನ್ನುವುದು ನಮ್ಮ ನಂಬಿಕೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಶ್ರೀ ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕರಾದ ಜಿ.ಕೆ. ಮಹಾಬಲೇಶ್ವರ ಭಟ್, ಕೆ.ಎಂ. ನಟರಾಜ್, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಶ್ಯಾಂ ಭಟ್, ಆಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸ್ವಾಗತ ಸಮಿತಿ ಅಧ್ಯಕ್ಷ ಡಾ. ರವೀಶ್ ಪಡುಮಲೆ, ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಹೊರೆಕಾಣಿಕೆ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸೇರಿದಂತೆ ಸಮಿತಿಗಳ ಪದಾಧಿಕಾರಿಗಳು, ಸಾವಿರಾರು ಭಕ್ತರು ಪಾಲ್ಗೊಂಡರು.

ಶನಿವಾರ ಬೆಳಗ್ಗೆ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ತತ್ವಹೋಮ, ತತ್ವ ಕಲಕ ಪೂಜಹಿಂದುಂಬೇಶಕರ್ಕರಿ ಪೂಜೆ, ಶಯ್ಯಾಪೂಜೆ, ತತ್ವಕಲಶಾಭಿಷೇಕ, ಜೀವೋದ್ದಾಸನೆ, ಜೀವಕಲಶ, ಶಯ್ಯೋನ್ನಯನ, ಮಹಾಪೂಜೆ, ಪ್ರಾರ್ಥನೆ, ಪುಣ್ಯಾಹ ನಡೆಯಿತು.
ಬೆಳಗ್ಗೆ 7ರಿಂದ ಅರಣೀಮಥನ, ಪ್ರಧಾನ ಕುಂಡದಲ್ಲಿ ಅಗ್ನಿ ಸ್ಥಾಪನೆ, ಅಗ್ನಿವಿಹರಣದೊಂದಿಗೆ ಶ್ರೀರಾಮ ತಾರಕ ಯಾಗ ಆರಂಭಗೊಂಡಿತು.ಯಾಗ ಶಾಲೆಯಲ್ಲಿ ೧೧೦ ಮಂದಿ ವೈಧಿಕರು ಏಕಕಾಲದಲ್ಲಿ ರಾಮತಾರಕ ಮಂತ್ರ ಪಠಿಸಿದರು. ೧೦ ಕುಂಡಗಳಲ್ಲಿ ಶ್ರೀರಾಮ ತಾರಕ ಯಾಗ ನಡೆಯಿತು. ಸಾವಿರಾರು ಮಂದಿ ಶ್ರೀರಾಮ ಜಪದೀಕ್ಷೆ ಪಡೆದವರು ಯಾಗಶಾಲೆಯ ಮುಂಭಾಗದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಮಾರ್ಗದರ್ಶನದಲ್ಲಿ ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಯಾಗ ನಡೆಯಿತು. ಕಾಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರ ವಿಜೇಯೇಂದ್ರ ಸರಸ್ವತಿ ಸ್ವಾಮೀಜಿ, ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಮಧ್ಯಾಹ್ನ ಮಹಾಪೂರ್ಣಾಹುತಿ ನಡೆದು ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು.













