ಪುತ್ತೂರು : ಹನುಮಂತನಂತೆ ಸೇವೆ,ಕರ್ತವ್ಯ ಮತ್ತು ಸಮರ್ಪಣಾ ಮನೋಭಾವವೇ ಜೀವನದ ನಿಜವಾದ ಮಾರ್ಗ. ಕಷ್ಟ ಕಾಲಕ್ಕೆ ನಿತ್ಯ ಪ್ರೇರಣೆ. ಶ್ರೀರಾಮನಂತೆ ಕಠಿಣ ಸಂದರ್ಭದಲ್ಲೂ ಸತ್ಯ, ಧರ್ಮ ಮತ್ತು ಮಾರ್ಯಾದೆಯನ್ನು ಪಾಲನೆ ಮಾಡಬೇಕಿದೆ. ಧರ್ಮ-ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸಮಾಜಮುಖಿ ಕಾರ್ಯಗಳನ್ನು ಮಾಡಲು ಎಲ್ಲರೂ ಸಂಘಟಿತರಾಗಬೇಕಿದೆ ಎಂದು
ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಹೇಳಿದರು. ಹನುಮಗಿರಿ ಕ್ಷೇತ್ರದಲ್ಲಿ ಶುಕ್ರವಾರ ಅವರು ಹನುಮಗಿರಿ ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವದ ಅಂಗವಾಗಿ ನಿರ್ಮಿಸಲಾಗಿರುವ ನೂತನ ಮುಖ ಗೋಪುರ ಹಾಗೂ ನವೀಕೃತ ಉದ್ಯಾನವನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.ಹನುಮಗಿರಿ ಕ್ಷೇತ್ರವು ಆಧ್ಮಾತ್ಮ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರೇರಣೆಯ ಕೇಂದ್ರವಾಗಿದೆ.ಸಮಾಜಕ್ಕೆ ನೈತಿಕ ಮೌಲ್ಯ, ಏಕತೆ ಮತ್ತು ಸದ್ಭಾವನೆಯ ಸಂದೇಶ ಸಾರುವ ಕೆಲಸ ಇಲ್ಲಿ ಆಗುತ್ತಿದೆ ಎಂದ ಅವರು, ನಮ್ಮ ಸಂಸ್ಕೃತಿಯು ವಿಶ್ವ ಭ್ರಾತೃತ್ವ, ವಿಶ್ವ ಕಲ್ಯಾಣ, ವಿಶ್ವ ಶಾಂತಿ ಮತ್ತು ಸಮಾನತೆಯ ಪ್ರೇರಣೆಯನ್ನು ನೀಡುತ್ತಿದೆ ಎಂದರು.
ಆಶೀರ್ವಚನ ನೀಡಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು, ಧರ್ಮದ ಮೇಲಿನ ಭಕ್ತಿ ಮತ್ತು ದೇಶದ ಮೇಲಿನ ಭಕ್ತಿ ಎರಡೂ ಅನುಭವವು ಹನುಮಗಿರಿಯಲ್ಲಿದೆ. ದೈವ ಭಕ್ತಿ ಮತ್ತು ದೇಶ ಭಕ್ತಿಯನ್ನು ಪ್ರತ್ಯಕ್ಷವಾಗಿ ಕಾಣಬಹುದಾದ ಹನುಮಗಿರಿ ನಿಜಕ್ಕೂ ಅದ್ಭುತ ಕ್ಷೇತ್ರವಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ಕುಮಾರ್ ಕಟೀಲು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.











