ಸುಳ್ಯ:ಸುಳ್ಯ ತಾಲೂಕಿನ ಅಜ್ಜಾವರ ಹಾಗೂ ಆಲೆಟ್ಟಿ ಗ್ರಾಮದ ಗಡಿ ಭಾಗಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಆನೆ ಹಾವಳಿ ತಡೆಯಲು ತೂಗು ಸೋಲಾರ್ ಬೇಲಿ ನಿರ್ಮಾಣ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ ಹಾಗೂ
ಇತರ ಪ್ರಮುಖರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮೇದಿನಡ್ಕ ಅಜ್ಜಾವರ ಆಸುಪಾಸಿನಲ್ಲಿ ರಾತ್ರಿ ಹಗಲು ಕಾಡನೆ ಹಾವಳಿಯ ತಪ್ಪಿಸುವ ಸಲುವಾಗಿ ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್ ಅಳವಡಿಸುವಂತೆ ಮಂಗಳೂರಿನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾಯಿತು. ಮಾಜಿ ಸಚಿವ ಬಿ ರಮನಾಥ ರೈ ನೇತೃತ್ವದಲ್ಲಿ ಗ್ರಾಮಸ್ಥರು ಭೇಟಿಯಾಗಿ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ದಿನಂಪ್ರತಿ ಕಾಡಾನೆ ಹಿಂಡುಗಳು ಬೀಡು ಬಿಟ್ಟಿದ್ದು ಮೇದಿನಡ್ಕ, ಭಸ್ಮಡ್ಕ, ಇರಂತಮಜಲು, ಪಡ್ಡಂಬೈಲು, ಕರ್ಲಪ್ಪಾಡಿ, ಶಾಂತಿಮಜಲು, ಮೇನಾಲ ಸೇರಿದಂತೆ ಇತರೆ ಭಾಗಗಳಲ್ಲಿ ರಾತ್ರಿ ಹಗಲು ಎನ್ನದೆ ನಿರಂತರ ಕಾಡಾನೆಗಳು ಕೃಷಿ ಹಾನಿ ಮಡುವ ಜೊತೆಗೆ ಜನರ ಹಾಗೂ ವಾಹನ ಸಂಚಾರಕ್ಕೂ ಸಮಸ್ಯೆಗಳನ್ನುಂಟುಮಾಡುತ್ತಿದೆ. ಇಲ್ಲಿನ ಜನರ ಕೃಷಿ ಮತ್ತು ಜೀವ ಕಾಪಾಡುವ ನಿಟ್ಟಿನಲ್ಲಿ ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್ ಅಳವಡಿಸಿ ಕಾಡಾನೆಗಳ ಹಾವಳಿಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿದ ಸಚಿವರು ಕ್ರಮಕ್ಕೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಚಿವರ ಭೇಟಿ ನಿಯೋಗದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ಸವಿನ್ ರೈ ಮೇನಾಲ,ಪ್ರಮೋದ್ ರೈ ಮೇನಾಲ, ಪ್ರದೀಪ್ ಪೂಜಾರಿ ಪೊಡುಂಬ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.












