ಸುಳ್ಯ:ಸುಳ್ಯದ ಮಾರ್ನಿಂಗ್ ಕ್ರಿಕೆಟ್ ಕ್ಲಬ್ನ (ಎಂಸಿಸಿ) ಹತ್ತನೇ ವರ್ಷಾಚರಣೆಯ ಪ್ರಯುಕ್ತ ಎಂಸಿಸಿ ಆಶ್ರಯದಲ್ಲಿ ಅ.29ರಂದು ಸುಳ್ಯದಲ್ಲಿ ನಡೆದ ರಸ್ತೆ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ ಆರು ವರ್ಷದ ಪುಟಾಣಿ ಹಂಸಿಕ ಪೇರಾಲು ವಿಶೇಷ ಗಮನ ಸೆಳೆದಿದ್ದಾಳೆ.
ದೀರ್ಘ ದೂರದ ಓಟದಲ್ಲಿ ಅಭ್ಯಾಸ ನಡೆಸುತ್ತಿರುವ ಹಂಸಿಕ ಸುಮಾರು 3 ಕಿ.ಮಿ.ನಷ್ಟು ಓಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಅರಂಬೂರಿನಿಂದ
ಗಾಂಧಿನಗರ ವಿಷ್ಣು ಸರ್ಕಲ್ ತನಕ ಮತ್ತು ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ ಶ್ರೀರಾಮ ಪೇಟೆಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದ ತನಕ ಸುಮಾರು 3 ಕಿ.ಮಿ.ಓಟದಲ್ಲಿ ಭಾಗವಹಿಸಿ ಈ ಬಾಲಕಿ ಓಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾಳೆ.
ಸಾಮಾಜಿಕ ಕಾರ್ಯಕರ್ತ ಹಾಗೂ ಕ್ರೀಡಾಪಟುವೂ ಆದ ಅಜಿತ್ ಪೇರಾಲು ಹಾಗೂ ಪ್ರಜ್ಞಾ ದಂಪತಿಗಳ ಪುತ್ರಿಯಾದ ಹಂಸಿಕ ಅಜಿತ್ ಪೇರಾಲು ವಿನೂಬನಗರ ವಿವೇಕಾನಂದ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ. ತಂದೆ ಅಜಿತ್ ಹಾಗೂ ಸಂಬಂಧಿ ಮ್ಯಾರಥಾನ್ ಓಟಗಾರ ವಿನಯ್ ನಾರಾಲು ಅವರ ಜೊತೆ ಹಂಸಿಕ ಇಂದು ರಸ್ತೆ ಓಟದಲ್ಲಿ ಭಾಗವಹಿಸಿದ್ದಾಳೆ. ಇದು ಹಂಸಿಕಾಳ ಐದನೇ ಮ್ಯಾರಥಾನ್ ಎಂದು ತಂದೆ ಅಜಿತ್ ಪೇರಾಲು ಹೇಳುತ್ತಾರೆ. ಮಂಗಳೂರು ಸೇರಿದಂತೆ ಇದಕ್ಕೂ ಮುನ್ನ ಹಂಸಿಕ ನಾಲ್ಕು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದಳು.
ಅಜಿತ್ ಪೇರಾಲು ಹಾಗೂ ವಿನಯ್ ನಾರಾಲು ಜೊತೆ ಹಂಸಿಕ ಕೂಡ ಓಟ ಅಭ್ಯಾಸ ನಡೆಸುತ್ತಿದ್ದಾಳೆ. ಮ್ಯಾರಥಾನ್ ಭಾಗವಹಿಸಿದ ಪುಟಾಣಿ ಹಂಸಿಕ ಪೇರಾಲುಗೆ ಎಂಸಿಸಿ ವತಿಯಿಂದ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಮ್ಯಾರಥಾನ್ನಲ್ಲಿ ಭಾಗವಹಿಸಿದ ಪುಟಾಣಿಗಳಾದ ಹಂಸಿ ಪೇರಾಲು, ಅಯಾಂಶು ಹಾಗೂ ರೋಹನ್ಗೆ ಸ್ಮರಣಿಕೆ, ಸರ್ಟಿಫಿಕೇಟ್ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.