ಸುಳ್ಯ: ಗ್ಯಾರಂಟಿ ಯೋಜನೆಗಳ ಸುಳ್ಯ ತಾಲೂಕು ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆಯಲ್ಲಿ ನಡೆಯಿತು.ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲಿಸಿ ಪಾಲನಾ ವರದಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು.ಅನ್ನ ಭಾಗ್ಯ ಯೋಜನೆಯ ಪ್ರಗತಿ ಬಗ್ಗೆ
ಚರ್ಚೆ ನಡೆದು 776 ಬಿಪಿಎಲ್ ಪಡಿತರ ಚೀಟಿಗಳ ಪೈಕಿ 212 ಪಡಿತರ ಚೀಟಿಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. 242 ಪಡಿತರ ಚೀಟಿಯನ್ನು ಯಥಾಸ್ಥಿತಿಯಲ್ಲಿರಿಸಲಾಗಿದೆ. 322 ಕಾರ್ಡ್ ಗಳು ಪರಿಶೀಲನೆಗೆ ಬಾಕಿ ಇದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಬೆಳ್ಳಾರೆ – ಸುಳ್ಯ ನಡುವಿನ 33 ಕೆ.ವಿ. ಅಂಡರ್ ಗ್ರೌಂಡ್ ಕೇಬಲ್ ವಿದ್ಯುತ್ ಲೈನ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಈ ತಿಂಗಳು ಅಂತ್ಯಕ್ಕೆ ಲೈನ್ ಕಾಮಗಾರಿ ಪೂರ್ಣಗೊಂಡು ಲೈನ್ ಚಾರ್ಜ್ ಮಾಡಲಾಗುವುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದರು. ಸುಳ್ಯದ 110 ಕೆ.ವಿ. ಸಬ್ ಸ್ಟೇಷನ್ ಹಾಗೂ ಲೈನ್ ಕಾಮಗಾರಿ ಯಾವ ಹಂತದಲ್ಲಿದೆ ಎಂದು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಪ್ರಶ್ನಿಸಿದರು ಅರಣ್ಯ ಪ್ರದೇಶದಲ್ಲಿ ಲೈನ್ ಹಾದುಹೋಗಬೇಕಾದ ಕಡೆಗಳಲ್ಲಿನ ಕಾಮಗಾರಿ ನಡೆಸಲು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ವಿವಿದೆಡೆ ಆಕ್ಷೇಪ ಇರುವ ಕಡೆ ಜನರ ಮನವೊಲಿಸಿ ಕಾಮಗಾರಿ ಆರಂಭಿಸುವ ಪ್ರಕ್ರಿಯೆ ನಡೆಯುತಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದರು.

ಗೃಹ ಜ್ಯೋತಿ ಯೋಜನೆಗಳಿಗೆ ಸಂಬಂಧ ಪಟ್ಟಂತೆ ಪ್ರಗತಿ ಪರಿಶೀಲಿಸಿ ಗ್ರಾಹಕರ ಎರಡು ತಿಂಗಳ ವಿದ್ಯುತ್ ಬಿಲ್ಲಿನಷ್ಟು ಭದ್ರತಾ ಠೇವಣಿಯು ಗ್ರಾಹಕರ ಖಾತೆಯಲ್ಲಿ ಇರಬೇಕಾಗಿರುತ್ತದೆ. ಪ್ರಸ್ತುತ ಗ್ರಾಹಕರ ಖಾತೆಯಲ್ಲಿ 2 ತಿಂಗಳ ಬಿಲ್ಲಿನಷ್ಟು ಠೇವಣಿ ಕಡಿಮೆ ಇರುವ ಗ್ರಾಹಕರಿಗೆ ವ್ಯತ್ಯಾಸ ಮೊತ್ತವನ್ನು ಬೇಡಿಕೆ ಮಾಡಲಾಗಿರುತ್ತದೆ. ಪವರ್ ಮ್ಯಾನ್ ಮುಖಾಂತರ ಗ್ರಾಹಕರಿಗೆ ತಿಳುವಳಿಕೆ ನೀಡಿ ಹಂತ ಹಂತ ವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸುಳ್ಯ ಶಾಖೆಯ ಕೊಯಿಕುಳಿ ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿದ್ದು 3ಫೇಸ್ ವಿದ್ಯುತ್ ಇಲ್ಲದೆ ಕೃಷಿಕರು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಹೊಸ ಪರಿವರ್ತಕ ಅಳವಡಿಸುವಂತೆ ಸದಸ್ಯ ಭವಾನಿಶಂಕರ್ ಕಲ್ಮಡ್ಕ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಶಕ್ತಿ ಯೋಜನೆ ಪ್ರಗತಿ ಬಗ್ಗೆ ಪರಿಶೀಲಿಸಿ ಸುಳ್ಯದಿಂದ ಮಂಡೆಕೋಲಿಗೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಬಸ್ಸು ಒದಗಿಸುವ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಯುವನಿಧಿಗೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನಲ್ಲಿ ಒಟ್ಟು 410 ಪಲಾನುಭವಿಗಳಿದ್ದು ಶೇ. 81.18% ಪ್ರಗತಿ ಇದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಡಿ. 23ರಂದು ಮಂಗಳೂರಿನ ಪುರಭವನದಲ್ಲಿ ಜಿಲ್ಲಾ ಗ್ಯಾರಂಟಿ ಸಮಾವೇಶ ನಡೆಯಲಿದ್ದು, ಸುಳ್ಯ ತಾಲೂಕಿನಿಂದ ಪಲಾನುಭವಿಗಳನ್ನು ಮಂಗಳೂರಿನ ಸಮಾವೇಶಕ್ಕೆ ಭಾಗವಹಿಸಲು ಮಾಡಿರುವ ವ್ಯವಸ್ಥೆ ಮತ್ತು ಪೂರ್ವತಯಾರಿ ಬಗ್ಗೆ ಸಭೆಯಲ್ಲಿ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಡಿದರು.
ಸಭೆಯಲ್ಲಿ ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ರವಿ ಗುಂಡಡ್ಕ,ಧನುಷ್ ಕುಕ್ಕೇಟಿ, ಸೋಮಶೇಖರ್ ಕೇವಳ, ರಾಜು ನೆಲ್ಲಿಕುಮೇರಿ, ಎ ಬಿ ಅಬ್ಬಾಸ್, ಈಶ್ವರ ಆಳ್ವ, ಲತೀಫ್ ಅಡ್ಕಾರ್, ಇಬ್ರಾಹಿಂ ಶಿಲ್ಪಾ, ಶ್ರೀಮತಿ ಕಾಂತಿ ಬಿ ಎಸ್, ಶ್ರೀಮತಿ ಭವಾನಿ ಬೊಮ್ಮಟ್ಟಿ, ಉಪಸ್ಥಿತರಿದ್ದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹನಾಧಿಕಾರಿ ರಾಜಣ್ಣ ಸಭೆ ನಡೆಸಿಕೊಟ್ಟರು. ಗ್ಯಾರಂಟಿ ಯೋಜನೆಗಳಿಗೆ ಸಂಬಂದಿಸಿದ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.













