ಮಂಗಳೂರು:ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ ಅನುಷ್ಟಾನ ದ.ಕ. ಜಿಲ್ಲೆಯಲ್ಲಿ ಉತ್ತಮವಾಗಿದೆ. ಸಣ್ಣಪ್ಟು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಗ್ರಾ.ಪಂ. ಮಟ್ಟದಲ್ಲೂ ಯೋಜನೆ ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಚರ್ಚಿಸಿ ನೋಡಲ್ ಅಧಿಕಾರಿಗಳನ್ನು ನೇಮಕಕ್ಕೆ ಕ್ರಮ ವಹಿಸಲಿದ್ದಾರೆ ಎಂದು
ಕರ್ನಾಟಕ ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರಕಾರದ ಐದು ಗ್ಯಾರಂಟಿ ಯೋಜನೆಗಲಿಂದ ಗ್ರಾಮ ಮಟ್ಟದವರೆಗೆ ಯಾರೊಬ್ಬ ಅರ್ಹ ಫಲಾನುಭವಿಯೂ ವಂಚಿತರಾಗಬಾರದು.
ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿದ್ದರೂ ತಾಂತ್ರಿಕ ಕಾರಣಗಳಿಂದ ಕೆಲವು ಮಂದಿಗೆ ಗೃಹಲಕ್ಷ್ಮಿ ತಲುಪಿಲ್ಲ. ಪ್ರತಿ ಅರ್ಹರನ್ನು ಪತ್ತೆ ಹಚ್ಚಿ ಯೋಜನೆ ಒದಗಿಸುವುದು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳ ಜವಾಬ್ಧಾರಿಯಾಗಿದೆ. ಬೂತ್ ಮಟ್ಟದಲ್ಲೂ ಯೋಜನೆ ಅನುಷ್ಠಾನ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.
ಗೃಹಲಕ್ಷ್ಮಿಯೋಜನೆಯಡಿ ರೇಶನ್ ಕಾರ್ಡ್ಗಳ ಆಧಾರದಲ್ಲಿ ಫಲಾನುಭವಿಗಳನ್ನು ಗುರುತಿಸಿ ಗುರಿ ನಿಗದಿಪಡಿಸಲಾಗಿತ್ತು. ದ.ಕ. ಜಿಲ್ಲೆಯಲ್ಲಿ ಹೀಗೆ ಗುರುತಿಸಲಾದ ಒಟ್ಟು 4,03,333 ಮಹಿಳೆಯರಲ್ಲಿ ಶೇ.92ರಷ್ಟು ಮಂದಿಗೆ (3,69,292) 2 ಸಾವಿರ ರು. ತಲುಪುತ್ತಿದೆ. ತಮಗೆ ಅಗತ್ಯ ಇಲ್ಲ ಎಂಬ ಕಾರಣಕ್ಕೋ, ಮಾಹಿತಿ ಕೊರತೆಯಿಂದಲೋ ಅಥವಾ ಭೌತಿಕವಾಗಿ ಬಂದು ಅರ್ಜಿ ಹಾಕಲು ಸಾಧ್ಯವಿಲ್ಲದೆ ಉಳಿದವರು ಇರಬಹುದು. ಅವರೆಲ್ಲರನ್ನು ಹುಡುಕಿ ಗೃಹಲಕ್ಷ್ಮಿಗೆ ನೋಂದಣಿ ಮಾಡಿಸಿ ಶೇ.100ರಷ್ಟು ಗುರಿ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಂದರು.
ವಿವಿಧ ರೀತಿಯ ಸಾಲ ಪಡೆದುಕೊಂಡವರು ಆದಾಯ ತೆರಿಗೆ ಪಾವತಿದಾರರು ಎಂದು ಆನ್ ಲೈನ್ನಲ್ಲಿ ತಾನಾಗೇ ನಮೂದಾಗುತ್ತಿದೆ. ಇದರಿಂದ ಅನೇಕರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಮಸ್ಯೆ ನೀಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಶಕ್ತಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಮಹಿಳೆಯರು ಪ್ರಯೋಜನ ಪೆಡಯುತ್ತಿದ್ದರೂ, ಅನೇಕ ಕಡೆ ಸರಕಾರಿ ಬಸ್ಸುಗಳಿಲ್ಲ ಎಂಬ ಕೂಗು ಇದೆ. ಜಿಲ್ಲೆಯಲ್ಲಿ ಹೊಸದಾಗಿ 170 ರೂಟ್ಗಳಿಗೆ ಸರಕಾರಿ ಬಸ್ಸು ಓಡಿಸುವ ಬೇಡಿಕೆಯಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಳಿ ಮಾತುಕತೆ ನಡೆಸಲಾಗುವುದು ಎಂದರು.
ದ.ಕ. ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮೀ ಯೋಜನೆ ಕಂತು ಫಲಾನುಭವಿಗಳಿಗೆ ತಲುಪಿಲ್ಲ. ಈ ಎರಡೂ ತಿಂಗಳ ಹಣ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಪಂ ಸಿಇಒ ಡಾ.ಆನಂದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮತ್ತಿತರರು ಇದ್ದರು.