ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗುಜರಾತ್ ಟೈಟನ್ಸ್ 8 ವಿಕೆಟ್ಗಳ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ 17.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಜೋಸ್ ಬಟ್ಲರ್ ಸ್ಪೋಟಕ ಅರ್ಧ ಶತಕ ಹಾಗೂ
ಸಾಯ್ ಸುದರ್ಶನ್ ಆಕರ್ಷಕ ಬ್ಯಾಟಿಂಗ್ ಗುಜರಾತ್ಗೆ ಸುಲಭ ಜಯ ತಂದು ಕೊಟ್ಟಿತು. ಆರ್ಸಿಬಿ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದ ಗುಜರಾತ್ ಬ್ಯಾಟರ್ಗಳು ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿ ಸ್ಕೋರ್ ಏರಿಸಿದರು. ಜೋಸ್ ಬಟ್ಲರ್ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 73 ರನ್ ಗಳಿಸಿದರೆ, ಸಾಯ್ ಸುದರ್ಶನ್ 36 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರರು. ನಾಯಕ ಶುಭ್ಮನ್ ಗಿಲ್ 14 ರನ್ ಬಾರಿಸಿದರೆ, ರುಥರ್ಪೋರ್ಡ್ 18 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 30 ರನ್ ಬಾರಿಸಿದರು. ಜಿಟಿ ಬ್ಯಾಟರ್ಗಳು ಒಟ್ಟಾರೆ 14 ಬೌಂಡರಿ ಹಾಗೂ 11 ಸಿಕ್ಸರ್ ಎತ್ತಿದರು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿಯ ಪ್ರಮುಖ ಬ್ಯಾಟರ್ಗಳು ನಿರಾಸೆ ಮೂಡಿಸಿದರು. ವಿರಾಟ್ ಕೊಹ್ಲಿ (7). ಫಿಲ್ ಸಾಲ್ಟ್ (14), ದೇವತ್ತ ಪಡಿಕ್ಕಲ್ (4), ನಾಯಕ ರಜತ್ ಪಾಟೀದಾರ್ (12), ಆಲ್ರೌಂಡರ್ ಕೃಣಾಲ್ ಪಾಂಡ್ಯ (5) ಪ್ರೇಕ್ಷಕರ ನಿರೀಕ್ಷೆ ಹುಸಿಗೊಳಿಸಿದರು. ಲಿಯಾಮ್ ಲಿವಿಂಗ್ಸ್ಟೋನ್ ಅವರ ಅರ್ಧ ಶಕತ ಸಿಡಿಸಿ ಆಸರೆಯಾದರು. 40 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಐದು ಸಿಕ್ಸರ್ ನೆರವಿನಿಂದ 54 ರನ್ ಸಿಡಿಸಿದರೆ ಜಿತೇಶ್ ಶರ್ಮಾ ಅವರು 21 ಎಸೆತಗಳಲ್ಲಿ 33 ರನ್ ಗಳಿಸಿದರು. ಇದರಲ್ಲಿ ಒಂದು ಸಿಕ್ಸರ್ ಹಾಗೂ
ಐದು ಬೌಂಡರಿಗಳಿದ್ದವು. 17 ಎಸೆತ ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದ ಟಿಮ್ ಡೇವಿಡ್ ಕೊನೆಯಲ್ಲಿ ಬೀಸಾಟ ಆಡಿ ಸವಾಲಿನ ಮೊತ್ತ ಪೇರಿಸಲು ನೆರವಾದರು.ಈ ಮೊದಲು ಆರ್ಸಿಬಿಯಲ್ಲೇ ಇದ್ದು, ಈ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಪಾಲಾದ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿ 19 ರನ್ ನೀಡಿ 3 ವಿಕೆಟ್ಗಳನ್ನು ಕಬಳಿಸಿದರು. ಸಾಯಿ ಕಿಶೋರ್ ಅವರು 22 ರನ್ ನೀಡಿ 2 ವಿಕೆಟ್ ಪಡೆದರೆ, ಅರ್ಶದ್ ಖಾನ್, ಪ್ರಸಿದ್ಧ ಕೃಷ್ಣ, ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಈಡನ್ ಗಾರ್ಡನ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಚೆಪಾಕ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ದು ಬಂದಿದ್ದ ಆರ್ಸಿಬಿಗೆ ಈ ಐಪಿಎಲ್ನಲ್ಲಿ ಸೋಲಾಯಿತು.