ಅಹಮದಾಬಾದ್: ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 35 ರನ್ಗಳಿಂದ ಜಯಿಸಿತು. ಈ ಮೂಲಕ ಟೈಟನ್ಸ್ ತಂಡವು ಪ್ಲೇ ಆಫ್ ಕನಸನ್ನು ಜೀವಂತವಾಗಿಸಿಕೊಂಡಿತು.
ಟಾಸ್ ಗೆದ್ದ ಚೆನ್ಣೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕವಾಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟೈಟನ್ಸ್ ಆರಂಭಿಕ ಜೋಡಿ
ನಾಯಕ ಶುಭಮನ್ ಗಿಲ್ (104; 55ಎ, 4X9, 6X6) ಹಾಗೂ ಸಾಯಿ ಸುದರ್ಶನ್ (103; 51ಎ, 4X5, 6X7) ಮೊದಲ ವಿಕೆಟ್ ಜೊತೆಯಾಟದಲ್ಲಿ 210 ರನ್ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್ಗಳಲ್ಲಿ 3 ವಿಕೆಟ್ಗಳಿಗೆ 231 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡವು 10 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ರಚಿನ್ ರವೀಂದ್ರ, ಅಜಿಂಕ್ಯ ರಹಾನೆ ಹಾಗೂ ಋತುರಾಜ್ ಡಗ್ಔಟ್ ಸೇರಿದರು. ಡ್ಯಾರಿಲ್ ಮಿಚೆಲ್ (63;34ಎ) ಮತ್ತು ಮೋಯಿನ್ ಅಲಿ (56; 36ಎ) ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 109 ರನ್ ಗಳಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಗೆಲುವಿಗೆ ಸಾಕಾಗಲಿಲ್ಲ. ಇದರಿಂದಾಗಿ ಚೆನ್ನೈ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗೆ 196 ರನ್ ಗಳಿಸಲಷ್ಟೇ ಶಕ್ತವಾಯಿತು. ಮೋಹಿತ್ ಮೂರು ವಿಕೆಟ್ ಪಡೆದರೆ, ರಶೀದ್ ಖಾನ್ ಎರಡು ವಿಕೆಟ್ ಗಳಿಸಿದರು.
ಗುಜರಾತ್ ಟೈಟನ್ಸ್ ತಂಡವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಜಯಿಸುವುದರೊಂದಿಗೆ ಪ್ಲೇ ಆಫ್ ಲೆಕ್ಕಾಚಾರ ಮತ್ತಷ್ಟು ಕುತೂಹಲ ಕೆರಳಿಸಿದೆ.ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಪ್ರವೇಶಿಸುವ ಸಣ್ಣ ಅವಕಾಶವೊಂದು ಸೃಷ್ಟಿಯಾಗಿದೆ. ಟೈಟನ್ಸ್ಗೂ ಅವಕಾಶ ಇದೆ.