ಬಳ್ಪ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿದ ಬಳ್ಪ ಗ್ರಾಮದಲ್ಲಿ ಗ್ರಾಮೋತ್ಸವ 2024 ಜ.10ರಂದು ಬಳ್ಪ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಗ್ರಾಮವಿಕಾಸ ಪ್ರತಿಷ್ಠಾನ ಬಳ್ಪ – ಕೇನ್ಯ, ಗ್ರಾಮ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆದ ಗ್ರಾಮೋತ್ಸವದ ಅಂಗವಾಗಿ ಕೃಷಿ ಹಾಗೂ ವಸ್ತು ಪ್ರದರ್ಶನ, ಬಳಿಕ ಕೃಷಿ
ವಿಜ್ಞಾನಿಗಳಿಂದ ಮಾಹಿತಿ ಕಾರ್ಯಕ್ರಮ ನಡೆಯಿತು. ವಿವಿಧ ಕೃಷಿ ಉಪಕರಣಗಳ ಪ್ರದರ್ಶನ. ಡ್ರೋನ್ ಮೂಲಕ ಔಷಧಿ ಸಿಂಪಡಿಸುವ ಪ್ರಾತ್ಯಕ್ಷಿಕೆ ಮತ್ತು ಬಳಸುವವರ ಮಾಹಿತಿ, ಕೀಟನಾಶಕ ಸಿಂಪಡಿಸುವ ಪ್ರಾತ್ಯಕ್ಷಿಕೆ ವಿಶೇಷವಾಗಿತ್ತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆ , ಸೌಲಭ್ಯಗಳ ಮಾಹಿತಿ, ನೋಂದಣಿ ಹಾಗೂ ಗ್ಯಾಸ್ ಬಳಕೆದಾರರ ಕೆವೈಸಿ ಯನ್ನು ಸ್ಥಳದಲ್ಲೆ ಮಾಡಿಕೊಡಲಾಯಿತು. ಕುಂಬಾರರ ಮೂಲಕ ಮಡಿಕೆ ತಯಾರು ಮಾಡುವ ಪ್ರಾತ್ಯಕ್ಷಿಕೆ, ಮುತ್ತು ಬಳಸುವವರ ಮಾಹಿತಿ ನೀಡಲಾಯಿತು.
ಕೃಷಿ ಮಾಹಿತಿ ಕಾರ್ಯಕ್ರಮ:
ಗ್ರಾಮೋತ್ಸವ ಕಾರ್ಯಕ್ರಮದ ಅಂಗವಾಗಿ ಬಳ್ಪ ಶಾಲಾ ಆವರಣದಲ್ಲಿ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಕೃಷ್ಣ ರೈ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮಸ್ಥರಿಗೆ ಎಲ್ಲಾ ರೀತಿಯ ಸೌಕರ್ಯ ದೊರೆತಲ್ಲಿ ಆ ಗ್ರಾಮ ಆದರ್ಶ ಗ್ರಾಮವಾಗಲಿದೆ. ನಮ್ಮ ದೇಶ ರಾಮ ರಾಜ್ಯವಾಗಬೇಕು ಎಂದು ಗಾಂಧೀಜಿ ಚಿಂತಿಸಿದ್ದರು. ರಾಮರಾಜ್ಯದ ಚಿಂತನೆಯಂತೆ ಸಂಸದರು ಬಳ್ಪವನ್ನು ಆದರ್ಶ ಗ್ರಾಮವನ್ನಾಗಿಸಬೇಕೆಂಬ ಚಿಂತನೆಯನ್ನಿಟ್ಟಿದ್ದರು. ಅದರಂತೆ ಇಂದು ಬಳ್ಪದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದ ಅವರು ಕೃಷಿಕರು ಮಾಹಿತಿ ಪಡೆದು ಲಾಭದಾಯಕ ಜೀವನ ನಡೆಸಬಹುದು. ವೈಜ್ಞಾನಿಕ ರೀತಿಯ ಸಮಗ್ರ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಬಹುದು ಎಂದರು. ಅಡಿಕೆ ಹಾಗೂ ಇನ್ನಿತರ ಕೃಷಿಯಲ್ಲಿ ರೋಗ ನಿರೋಧಕ ಶಕ್ತಿ ಬಲವರ್ಧನೆ ಎಂಬ ವಿಷಯದ ಬಗ್ಗೆ ವಿಟ್ಲ ಸಿಪಿಸಿಆರ್ಐ ವಿಜ್ಞಾನಿಗಳಾದ ಡಾ.ಭವಿಷ್ ಹಾಗೂ ಡಾ.ನಾಗರಾಜ್ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ಸಂಸದ ನಳಿನ್ ಕುಮಾರ್ ಕಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಗ್ರಾಮ ವಿಕಾಸ ಟ್ರಸ್ಟ್ನ ಅಧ್ಯಕ್ಷ ವಿನೋದ್ ಬೊಳ್ಮಲೆ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಭ್ರಮ:
ಬಳ್ಳ, ಕೇನ್ಯ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಸಾಂಸ್ಕೃತಿಕ ವೈಭವ ನಡೆಯಿತು. ರಾತ್ರಿ ಕಲಾಸಂಗಮ ಕಲಾವಿದರಿಂದ ವಿಭಿನ್ನ ಶೈಲಿಯ ತುಳು ನಾಟಕ ‘ಶಿವದೂತೆ ಗುಳಿಗೆ’ ಪ್ರದರ್ಶನಗೊಂಡಿತು.









