ಸುಳ್ಯ:ನನ್ನನ್ನು ಯಾರೂ ಪಕ್ಷದಿಂದ ಉಚ್ಚಾಟನೆ ಮಾಡಿಲ್ಲ, ನನಗೆ ಇದುವರೆಗೆ ಯಾವುದೇ ಉಚ್ಚಾಟನೆ ಆದೇಶವೂ ಬಂದಿಲ್ಲ. ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಮ್ಮ ತಂಡ ಕಾಂಗ್ರೆಸ್ ಬೆಂಬಲಿಗರಾಗಿಯೇ ಸ್ಪರ್ಧೆ ನಡೆಸುತ್ತೇವೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಿ.ಕೆ.ಹಮೀದ್ ಗೂನಡ್ಕ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಲಾಕ್ ಕಾಂಗ್ರೆಸ್ನ ಎಲ್ಲಾ
ಕಾರ್ಯಕ್ರಮಗಳಿಗೆ, ಸಭೆಗೆ, ಅಲ್ಪ ಸಂಖ್ಯಾತ ಕಾಂಗ್ರೆಸ್ನ ಎಲ್ಲಾ ಸಭೆಗಳಿಗೆ ನನಗೆ ಕರೆ ಬರುತ್ತದೆ, ನಾನು ಭಾಗವಹಿಸುತ್ತೇನೆ. ಈ ಹಿಂದೆ ಇದ್ದ ಕೆಲವೊಂದು ಗೊಂದಲಗಳನ್ನು ಕೆಪಿಸಿಸಿ ಉಸ್ತುವಾರಿ ಮಮತ ಗಟ್ಟಿ ಅವರ ನೇತೃತ್ವದಲ್ಲಿ ಮಾತುಕತೆ ಮೂಲಕ ಸರಿಪಡಿಸಿ ಎಲ್ಲರನ್ನು ಒಟ್ಟು ಸೇರಿಸಿ ಒಟ್ಟಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ನಾನು ಯಾವತ್ತೂ ಕಾಂಗ್ರೆಸ್ ಪಕ್ಷದವನೇ, ಮುಂದೆಯೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಪಾಜೆಯ ಎರಡು ಬೂತ್ಗಳ ಜವಾಬ್ದಾರಿ ವಹಿಸಿ ಲೀಡ್ ತಂದು ಕೊಡುವ ಪ್ರಯತ್ನ ನಡೆಸಿದ್ದೇನೆ ಎಂದು ಹೇಳಿದ ಅವರು ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದಲೇ ಸ್ಪರ್ಧೆ ಮಾಡುತ್ತೇವೆ.
ಗ್ರಾಮದ ಅಭಿವೃದ್ಧಿಗೆ, ಪಕ್ಷ ಸಂಘಟನೆಗೆ ಸಕ್ರೀಯವಾಗಿ ಕೆಲಸ ಮಾಡುವ ನಮಗೆಪಕ್ಷ ಅವಕಾಶ, ಬೆಂಬಲ ನೀಡುವ ವಿಶ್ವಾಸ ಇದೆ. ಈಗ ಕಾಂಗ್ರೆಸ್ನ ಗ್ರಾಮ ಸಮಿತಿಗಳು ಮಾತ್ರ ಇದೆ. 2-3 ಗ್ರಾಮ ಸಮಿತಿಗಳು ಸೇರಿದ ವಲಯ ಸಮಿತಿಗಳು ಈಗ ಎಲ್ಲಿಯೂ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಅವರು ಹೇಳಿದರು.













