ಮುಂಬೈ: ಶುಭಮನ್ ಗಿಲ್ ಅವರನ್ನು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕರನ್ನಾಗಿ ನೇಮಕ ಮಾಡಲಾಯಿತು.
ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಅವರು 18 ಆಟಗಾರರ ತಂಡವನ್ನು ಪ್ರಕಟಿಸಿದರು. ಗಿಲ್ ಈ ತಂಡದ ನಾಯಕರಾಗಿದ್ದಾರೆ. ತಂಡವು ಮುಂದಿನ ತಿಂಗಳು ಇಂಗ್ಲೆಂಡ್ನಲ್ಲಿ
ನಡೆಯುವ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲಿದೆ.
25 ವರ್ಷ ವಯಸ್ಸಿನ ಗಿಲ್ ಅವರು ಭಾರತ ತಂಡದ ಚುಕ್ಕಾಣಿ ಹಿಡಿದ ಕಡಿಮೆ ವಯಸ್ಸಿನ ಐದನೇ ಆಟಗಾರನಾಗಿದ್ದಾರೆ. ಈ ಹಿಂದೆ ಮನ್ಸೂರ್ ಅಲಿ ಖಾನ್ ಪಟೌಡಿ (21 ವರ್ಷ), ಸಚಿನ್ ತೆಂಡೂಲ್ಕರ್ (23 ವರ್ಷ), ಕಪಿಲ್ ದೇವ್ (24 ವರ್ಷ) ಮತ್ತು ರವಿ ಶಾಸ್ತ್ರಿ (25 ವರ್ಷ) ಅವರು ಕಿರಿಯ ವಯಸ್ಸಿನಲ್ಲಿ ನಾಯಕರಾಗಿದ್ದರು.ತಂಡಕ್ಕೆ ವಿಕೆಟ್ಕೀಪರ್ ರಿಷಭ್ ಪಂತ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಜೂನ್ 20ರಂದು ಲೀಡ್ಸ್ನಲ್ಲಿ ನಡೆಯುವ ಮೊದಲ ಟೆಸ್ಟ್ನಲ್ಲಿ ತಂಡವು ಕಣಕ್ಕಿಳಿಯಲಿದೆ.
ಗಿಲ್ಗಿಂತ ಹೆಚ್ಚು ಅನುಭವಿಯಾಗಿರುವ 27 ವರ್ಷದ ಪಂತ್ ಅವರು 43 ಟೆಸ್ಟ್ಗಳನ್ನು ಆಡಿದ್ದಾರೆ. 42.11ರ ಸರಾಸರಿಯಲ್ಲಿ 2948 ರನ್ ಪೇರಿಸಿದ್ದಾರೆ. ಕೆಳಕ್ರಮಾಂಕದಲ್ಲಿ ಉತ್ತಮ ಬ್ಯಾಟರ್ ಆಗಿರುವ ಅವರು ಆರು ಶತಕ ಮತ್ತು 15 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರು 2018ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈಚೆಗಷ್ಟೇ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ವಿರಾಟ್ ಕೊಹ್ಲಿ ಕೂಡ ನಿವೃತ್ತರಾಗಿದ್ದರು. ಆದ್ದರಿಂದ ತಂಡಕ್ಕೆ ಹೊಸ ನಾಯಕನನ್ನು ನೇಮಕ ಮಾಡಲಾಯಿತು.
ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಮತ್ತು ಎಡಗೈ ವೇಗಿ ಅರ್ಷದೀಪ್ ಅವರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯವ ಅವಕಾಶ ಲಭಿಸಿದೆ. ‘ಸಾಯಿ ಅವರನ್ನು ಐಪಿಎಲ್ನಲ್ಲಿಯ ಸಾಧನೆಯನ್ನು ನೋಡಿ ಆಯ್ಕೆ ಮಾಡಿಲ್ಲ. ಅವರನ್ನು ಬಹಳ ಸಮಯದಿಂದ ನೋಡುತ್ತಿದ್ದೇವೆ. ಅವರು ಪ್ರಮುಖ ಟೂರ್ನಿಗಳಲ್ಲಿ ಉತ್ತಮವಾಗಿ ಆಡಿದ್ದಾರೆ ಎಂದರು.ಅರ್ಷದೀಪ್ಅವರೂ ಈಚೆಗೆ ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ಆಡಿ ಬಂದಿದ್ದಾರೆ. ಅವರ ಆ ಅನುಭವವು ತಂಡಕ್ಕೆ ಉಪಯುಕ್ತವಾಗಲಿದೆ.
ಅಲ್ಲದೇ ಬ್ಯಾಟರ್ ಅಭಿಮನ್ಯು ಈಶ್ವರನ್, ಕರುಣ್ ನಾಯರ್ ಮತ್ತು ಎರಡನೇ ವಿಕೆಟ್ಕೀಪರ್ ಆಗಿ ಧ್ರುವ ಜುರೇಲ್ ಕೂಡ ಸ್ಥಾನ ಗಳಿಸಿದ್ದಾರೆ.
ಅಗ್ರಮಾನ್ಯ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ತಂಡದಲ್ಲಿದ್ದಾರೆ. ಆದರೆ ಅವರು ಎಲ್ಲ ಐದು ಪಂದ್ಯಗಳಲ್ಲಿಯೂ ಆಡುವುದು ಖಚಿತವಿಲ್ಲ. ಫಿಟ್ನೆಸ್ ಕಾರಣಕ್ಕಾಗಿ ಕೆಲವು ಪಂದ್ಯಗಳಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಯೂ ಇದೆ ಎಂದೂ ಹೇಳಲಾಗಿದೆ.
ತಂಡ:
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜ, ಧ್ರುವ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.





