ಸುಳ್ಯ: ಪ್ರತಿ ವರ್ಷದಂತೆ ಈ ಬಾರಿಯೂ ಕಾಡಾನೆಯೊಂದು ಪೆರಾಜೆ ಭಾಗದಿಂದ ಪಂಜ ಭಾಗಕ್ಕೆ ಪ್ರಯಾಣ ಬೆಳೆಸಿದೆ.
ಕೆಲವು ದಿನಗಳ ಹಿಂದೆ ಕೊಡಗಿನ ಗಡಿ ಪ್ರದೇಶ ಪೆರಾಜೆ ಭಾಗದಿಂದ ಹೊರಟ ಒಂಟಿ ಸಲಗ ತನ್ನ ಪ್ರಯಾಣ ಮುಂದುವರಿಸಿ ಪಂಜ ಸಮೀಪದ ಪುಳಿಕುಕ್ಕು ಅರಣ್ಯ ತಲುಪಿದೆ ಎಂದು ತಿಳಿದು ಬಂದಿದೆ. ಪಂಬೆತ್ತಾಡಿ ಕಡೆಯಿಂದ
ಫೆ.4 ರಂದು ರಾತ್ರಿ ಪ್ರಯಾಣ ಬೆಳೆಸಿದ ಕಾಡಾನೆ ಪುಳಿಕುಕ್ಕು ಅರಣ್ಯ ಭಾಗದಲ್ಲಿ ಬೀಡು ಬಿಟ್ಟಿದೆ ಎಂದು ಹೇಳಲಾಗಿದೆ. ಕಳೆದ ಹಲವು ವರ್ಷಗಳಿಂದ ವರ್ಚಕ್ಕೊಮ್ಮೆ ಸುಳ್ಯ ತಾಲೂಕಿನಾದ್ಯಂತ ಪ್ರಯಾಣಿಸುವ ಒಂಟಿ ಸಲಗ ಕೆಲವು ದಿನಗಳಿಂದ ಬಂಟಮಲೆ ಕಾಡಿನಲ್ಲಿ ಬೀಡು ಬಿಟ್ಟಿತ್ತು. ನಿನ್ನೆ ರಾತ್ರಿ ಪಂಬೆತ್ತಾಡಿ ಮೂಲಕ ಕರಿಕ್ಕಳದಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯನ್ನು ದಾಟಿದೆ. ಬಳಿಕ ಪಂಜದ ಗಾಳಿಬೀಡು ಮೂಲಕ ಚಿಂಗಾಣಿಗುಡ್ಡೆ, ಬೊಳ್ಳಾಜೆ , ನೆಕ್ಕಿಲ ಸಮೀಪದಲ್ಲಿ ಕೃಷಿ ತೋಟಗಳ ಮೂಲಕ ಸಂಚರಿಸಿ ಪುಳಿಕುಕ್ಕು ಅರಣ್ಯ ಸೇರಿಕೊಂಡಿದೆ.





