ಸುಳ್ಯ:ಅಡಿಕೆ ಆಮದಿಗೆ ಮತ್ತು ಕಳ್ಳಸಾಗಾಣಿಕೆಗೆ ಕೇಂದ್ರ ಸರ್ಕಾರ ಅಂಕುಶ ಹಾಕಬೇಕು ಎಂದು ಸುಳ್ಯ ವಿಧಾನಸಭಾ ಅಭ್ಯರ್ಥಿಯಾಗಿರುವ ಜಿ.ಕೃಷ್ಣಪ್ಪ ಅವರು ಒತ್ತಾಯಿಸಿದ್ದಾರೆ.ವಿದೇಶಗಳಿಂದ ನಮ್ಮ ದೇಶಕ್ಕೆ ಅಡಿಕೆ ಆಮದು ಮಾಡಿದರೆ ನಮ್ಮ ರೈತ ಕುಟುಂಬಗಳಿಗೆ ತೊಂದರೆಯಾಗಲಿದೆ. ಅದರಲ್ಲೂ ದೇಶದಲ್ಲಿ
ಅತೀ ಹೆಚ್ಚು ಅಡಿಕೆ ಬೆಳೆಗಾರರಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಎಷ್ಟೋ ರೈತ ಕುಟುಂಬಗಳು ಅಡಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ.ಈ ಬಗ್ಗೆ ಕೇಂದ್ರ ಸರ್ಕಾರವೂ ತೀವ್ರವಾಗಿ ಯೋಚಿಸಬೇಕಿದೆ. ಇಂಡೋನೇಷ್ಯಾ ಮತ್ತು ಶ್ರೀಲಂಕಾದ ಅಡಿಕೆ ಆಮದಿಗೆ ಅಥವಾ ಕಳ್ಳಸಾಗಾಣಿಕೆಗೆ ಕೇಂದ್ರ ಸರ್ಕಾರ ಅಂಕುಶ ಹಾಕಬೇಕು. ವಿದೇಶದ ಅಡಿಕೆಯಿಂದ ಕರಾವಳಿಯ ಎರಡು ಜಿಲ್ಲೆಗಳ ರೈತರ ಅಡಿಕೆಗೆ ನಿರ್ದಿಷ್ಟ ಬೆಲೆ ಸಿಗದಿದ್ದರೆ ನ್ಯಾಯಕ್ಕಾಗಿ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಜಿ.ಕೃಷ್ಣಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.