ಬೆಂಗಳೂರು: ಬಿಗು ಬೌಲಿಂಗ್ ದಾಳಿ ನಡೆಸಿದ ಶ್ರೀಲಂಕಾ ಮುಂದೆ ಕುಸಿದ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ 156 ರನ್ಗಳಿಗೆ ಆಲ್ ಔಟ್ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ಗೆ ಆರಂಭಿಕರಾದ
ಡೇವಿಡ್ ಮಲಾನ್ ಮತ್ತು ಜಾನಿ ಬೆಸ್ಟೋ ಜೋಡಿ 44 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ ಕುಸಿತ ಕಂಡ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು. ಡೇವಿಡ್ ಮಲಾನ್(28), ಜೋ ರೂಟ್ (3), ಜಾನಿ ಬೆಸ್ಟೋ (31), ನಾಯಕ ಜಾಸ್ ಬಟ್ಲರ್ ( 8),ಲಿಯಾಮ್ ಲಿವಿಂಗ್ಸ್ಟೋನ್( 1) ಆಲ್ರೌಂಡರ್ ಮೋಯಿನ್ ಅಲಿ (15), ಕ್ರಿಸ್ ವೋಕ್ಸ್(0) ಬೇಗನೆ ನಿರ್ಗಮಿಸಿದರು. ಬೆನ್ ಸ್ಟೋಕ್ಸ್, 73 ಎಸೆತಗಳನ್ನು ಎದುರಿಸಿದ ಅವರು, 6 ಬೌಂಡರಿ ಸಹಿತ 43 ರನ್ ಗಳಿಸಿದರು.ಡೇವಿಡ್ ವಿಲ್ಲಿ (ಅಜೇಯ 14 ರನ್ ಗಳಿಸಿದರು.
ಲಂಕಾ ಪರ ಲಹಿರು ಕುಮಾರ 3 ವಿಕೆಟ್ ಉರುಳಿಸಿದರು. ಏಂಜೆಲೊ ಮ್ಯಾಥ್ಯೂಸ್, ಕುಶಾಲ್ ರಜಿತ ತಲಾ ಎರಡು ವಿಕೆಟ್ ಪಡೆದರೆ, ಇನ್ನೊಂದು ವಿಕೆಟ್ ಮಹೀಷ ತೀಕ್ಷಣ ಪಾಲಾಯಿತು.
ಟೂರ್ನಿಯಲ್ಲಿ ತಲಾ ನಾಲ್ಕು ಪಂದ್ಯಗಳಲ್ಲಿ ಆಡಿರುವ ಉಭಯ ತಂಡಗಳು, ಒಂದೊಂದು ಜಯವನ್ನಷ್ಟೇ ಸಾಧಿಸಿವೆ. ಹೀಗಾಗಿ ಸೆಮಿಫೈನಲ್ ರೇಸ್ನಲ್ಲಿ ಉಳಿಯಬೇಕಾದರೆ, ಇಲ್ಲಿ ಗೆಲ್ಲುವುದು ಎರಡೂ ತಂಡಗಳಿಗೆ ಅನಿವಾರ್ಯವಾಗಿದೆ.