ಪುತ್ತೂರು: ಮಹಿಳೆಯರಿಗೆ ಹೆಚ್ಚು ಅವಕಾಶ ನೀಡಬೇಕು ಎಂಬ ಹಿನ್ನಲೆಯಲ್ಲಿ ಉಡುಪಿ,ದ.ಕ ದಲ್ಲಿ ಮೂವರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡುವ ಯೋಚನೆಯಿತ್ತು. ಅಂತಿಮವಾಗಿ ಪುತ್ತೂರು ಮತ್ತು ಸುಳ್ಯದಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಪಕ್ಷದಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಇನ್ನೊಂದು ಪಕ್ಷಕ್ಕೆ ಹೋಗೋದು, ಪಕ್ಷೇತರವಾಗಿ
ನಿಲ್ಲುವುದು ಆದರ್ಶವಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಪ್ರಚಾರಕ್ಕೆ ಪುತ್ತೂರಿಗೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಪಕ್ಷದಲ್ಲಿದ್ದಾಗ ಎಲ್ಲರೂ ಮಿತ್ರರೇ, ಕಾಂಗ್ರೆಸ್ ಗೆ ಹೋದಾಗ ಎಲ್ಲರೂ ರಾಜಕೀಯ ಶತ್ರುಗಳೇ ಎಂದ ಅವರು ವಿಧಾನಸಭಾ ಚುನಾವಣೆಯಲ್ಲಿ 130 ಸೀಟು ಗಳಿಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗೆ ಅಭೂತಪೂರ್ವ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುಗೇರೋಡಿ ಬಾಲಕೃಷ್ಣ ರೈ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ, ನಗರ ಮಂಡಲದ ಅದ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು