ಮಂಗಳೂರು: ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಎದುರಾಗದಂತೆ ಅಗತ್ಯ ವ್ಯವಸ್ಥೆ ಮಾಡಿ ಸನ್ನದ್ಧರಾಗಿರುವಂತೆ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಸರಬರಾಜು ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪ್ರಸಕ್ತ ಪರಿಸ್ಥಿತಿಯಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಆದರೂ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾದರೆ, ಅದನ್ನು ನಿಭಾಯಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ ಈಗಾಗಲೇ ಇದಕ್ಕೆ ಅನುಗುಣವಾಗಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.ಜಿಲ್ಲೆಯಲ್ಲಿರುವ ವಿವಿಧ ಕಿರು ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ತೃಪ್ತಿದಾಯಕವಾಗಿದೆ. ಕುಡಿಯುವ ನೀರಿನ ಸರಬರಾಜಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸಚಿವರು ಸ್ಪಷ್ಟವಾಗಿ ಹೇಳಿದರು.
ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಅಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ ಬರಪರಿಹಾರ ನಿಧಿಯಲ್ಲಿ 3 ಕೋಟಿ ರೂಪಾಯಿ ಅನುದಾನ ಇದೆ. ಅಗತ್ಯ ಬಿದ್ದರೆ ಇನ್ನಷ್ಟು ನೆರವು ನೀಡಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಆನಂದ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಆನಂದ್ ಮತ್ತಿತರರು ಇದ್ದರು.







