ಸುಳ್ಯ: ತಾವು ದುಡಿಯುವ ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಪ್ರಾಣಿಗಳನ್ನು ಪ್ರೀತಿಯಿಂದ ಆರೈಕೆ ಮಾಡಿ ಚಿಕಿತ್ಸೆ ನೀಡುವ ಮೂಲಕ ಮೂಕ ಪ್ರಾಣಿಗಳ ಪ್ರೀತಿ, ಜನರ ಗೌರವಕ್ಕೆ ಪಾತ್ರರಾಗಿ ಸುಳ್ಯದ ಜನಪ್ರಿಯ ವೈದ್ಯರಾಗಿ ಹೆಸರು ಮಾಡಿದವರು ಡಾ.ನಿತಿನ್ ಪ್ರಭು. ಸುಳ್ಯದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ನಿತಿನ್ ಪ್ರಭು ತನ್ನ ವೃತ್ತಿಯನ್ನು ಪ್ರೀತಿಸುವಂತೆಯೇ ಯಕ್ಷಗಾನ ಕಲೆಯನ್ನೂ ಪ್ರೀತಿಸುತ್ತಾರೆ. ಯಕ್ಷಗಾನ ಕಲೆಯನ್ನು
ಆಸ್ವಾದಿಸುವುದು, ಪ್ರೋತ್ಸಾಹಿಸುವುದರ ಜೊತೆಗೆ ಯಕ್ಷಗಾನ ಪಾತ್ರಧಾರಿಯಾಗಿಯೂ ಮಿಂಚುತ್ತಾರೆ ಈ ವೈದ್ಯರು. ಹವ್ಯಾಸಕ್ಕಾಗಿ ವರ್ಷದಲ್ಲಿ ಒಂದೆರಡು ಬಾರಿಯಾದರೂ ಯಕ್ಷಗಾನ ವೇಷ ಹಾಕುತ್ತಾರೆ. ಸುಳ್ಯದ ಭುವನೇಶ್ವರಿ ಯಕ್ಷಗಾನ ಮಂಡಳಿಯ ವತಿಯಿಂದ ನಡೆಯುವ ಯಕ್ಷಗಾನ ಬಯಲಾಟಗಳಲ್ಲಿ ಇವರು ಹೆಚ್ಚಾಗಿ ವೇಷ ಹಾಕುತ್ತಾರೆ. ಯಕ್ಷಗಾನ ಮಂಡಳಿಯ ವತಿಯಿಂದ ಚೆನ್ನಕೇಶವ ದೇವಸ್ಥಾನದಲ್ಲಿ ಮೊನ್ನೆ ತಾನೆ ನಡೆದ ‘ಪೂತನೀ ಸಂಹಾರ’ ಯಕ್ಷಗಾನದಲ್ಲಿ ಕಂಸನ ವೇಷದಲ್ಲಿ ಇವರು ಯಕ್ಷ ರಂಗದ ಮೇಲೆ ತನ್ನ ಕಲಾ ವೈಭವ ಮೆರೆದಿದ್ದಾರೆ.
ಡಾ.ನಿತಿನ್ ಪ್ರಭು
ನಿತಿನ್ ಪ್ರಭು ಎಳೆವೆಯಲ್ಲಿಯೇ ಅಂದರೆ 5ನೇ ವಯಸ್ಸಿನಿಂದ ಯಕ್ಷಗಾನ ಕಲಿತಿದ್ದಾರೆ. ಶಾಲಾ ದಿನಗಳಲ್ಲಿ ಯಕ್ಷಗಾನ ವೇಷ ಹಾಕುತ್ತಿದ್ದರು. ಬಳಿಕ ಪಶುವೈದ್ಯಕೀಯ ಶಿಕ್ಷಣ ಪಡೆಯಲು ಬೆಂಗಳೂರು ಮತ್ತಿತರ ಕಡೆ ತೆರಳಿದಾಗ ಯಕ್ಷಗಾನ ಕಲಾ ರಂಗದಿಂದ ದೂರವಾದರು. ಬಳಿಕ ಪಶು ವೈದ್ಯಾಧಿಕಾರಿಯಾಗಿ ಸುಳ್ಯಕ್ಕೆ ಆಗಮಿಸಿದ ಮೇಲೆ ತನ್ನ ಯಕ್ಷಗಾನ ಪ್ರೀತಿ ಮತ್ತೆ ಟಿಸಿಲೊಡೆಯಿತು. ಬಳಿಕ ತನ್ನ ಯಕ್ಷ ಪ್ರೀತಿಗೆ ಮತ್ತು ಕಲಾ ಪ್ರತಿಭೆಗೆ ಒರಗೆ ಹಚ್ಚಿದ ಡಾ.ಪ್ರಭು ಯಕ್ಷಗಾನ ಪಾತ್ರಧಾರಿಯಾಗುತ್ತಾರೆ. ಕಲೆಯ
ಚಿತ್ರಗಳು:ಸುಪ್ರೀತ್ ಮೋಂಟಡ್ಕ.
ಜೊತೆಗಿನ ಪ್ರೀತಿ ಮತ್ತು ಆಸಕ್ತಿಯಿಂದ ಇವರು ಬಿಡುವಿನ ವೇಳೆಯಲ್ಲಿ ವರ್ಷದಲ್ಲಿ ಒಂದೆರಡು ಬಾರಿಯಾದರೂ ಯಕ್ಷಗಾನ ವೇಷ ಹಾಕಿ, ಗೆಜ್ಜೆ ಕಟ್ಟಿ ರಂಗ ಸ್ಥಳದಲ್ಲಿ ಪಾತ್ರಗಳಿಗೆ ಜೀವ ತುಂಬುತ್ತಾರೆ. ಡಾ.ನಿತಿನ್ ಪ್ರಭು ಅವರ ಪುತ್ರಿ ಸಮೀಕ್ಷಾ ಪ್ರಭು, ಸಹೋದರ ನರೇನ್ ಪ್ರಭು ಅವರ ಪುತ್ರ ಯೋಗೀಶ್ ಪ್ರಭು ಹಾಗೂ ಪುತ್ರಿ ಶ್ರೀನಿಧಿ ಕೂಡ ಯಕ್ಷಗಾನ ಕಲಿಯುತ್ತಿದ್ದಾರೆ.
‘ನಿತೀನ್ ಪ್ರಭು ಹಲವು ವರ್ಷಗಳಿಂದ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುವಯದರ ಜೊತೆಗೆ ರಂಗಸ್ಥಳದಲ್ಲಿ ವೇಷಧಾರಿ ಯಾಗಿ ಗುರುತಿಸಿಕೊಳ್ಳುವ ಮೂಲಕ ವಿಸ್ಮಯ ಮೂಡಿಸುತ್ತಾರೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರಾದ ಸುಪ್ರೀತ್ ಮೋಂಟಡ್ಕ.